ಜಯಪ್ರಕಾಶ್ ಹೆಗ್ಡೆ ಪಕ್ಷೇತರ ಅಭ್ಯರ್ಥಿಯಂತೆ ಮತ ಯಾಚಿಸುತ್ತಿರುವುದು ಶೋಚನೀಯ- ಕಿಶೋರ್ ಕುಮಾರ್

ಉಡುಪಿ, ಎ.19: ಕೇವಲ ಸ್ವಯಂ ಸ್ವಾರ್ಥ ಸಾಧನೆಗಾಗಿ ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಬಂದಿರುವ ಜಯಪ್ರಕಾಶ್ ಹೆಗ್ಡೆ, ತನ್ನ ಬೆಂಬಲಿಗ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಟೀಕಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲೇ ಎಡವಿದ್ದು, ಸ್ವಯಂ ಪಕ್ಷದಿಂದಲೇ ಉಚ್ಚಾಟನೆ ಗೊಂಡಿರುವ ಜಯಪ್ರಕಾಶ್ ಹೆಗ್ಡೆಯವರನ್ನು ಹಲವಾರು ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ದುಂಬಾಲು ಬಿದ್ದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದೆ. ಉಚ್ಚಾಟನೆಗೊಂಡಿದ್ದ ವ್ಯಕ್ತಿಯ ಪರವಾಗಿಯೇ ಮಗದೊಮ್ಮೆ ಮತಯಾಚನೆ ಮಾಡುವ ಸ್ಥಿತಿ ಕೆಲವರ ಪಾಲಿಗೆ ಒದಗಿ ಬಂದಿರುವುದು ದುರ್ದೈವ ಎಂದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಯಾವುದೇ ಕಾಂಗ್ರೆಸ್ ಮುಖಂಡರ ಹೆಸರನ್ನು ಉಲ್ಲೇಖಿಸದ ಹೆಗ್ಡೆ ಕಾಂಗ್ರೆಸ್ ಪಕ್ಷದ ಚಿಹ್ನೆಗೆ ಮಾತ್ರ ಸೀಮಿತವಾಗಿದ್ದು ಪಕ್ಷೇತರ ಅಭ್ಯರ್ಥಿಯಂತೆ ಮತ ಯಾಚಿಸುತ್ತಿರುವುದು ಶೋಚನೀಯ ಎಂದು ಅವರು ಆರೋಪಿಸಿದರು.

ಪಕ್ಷದಿಂದ ಉಚ್ಛಾಟನೆಗೊಂಡಾಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್‌ ಅವರ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಹೆಗ್ಡೆ, ಇದೀಗ ಓಟಿಗಾಗಿ ಅವರ ಪುತ್ತಳಿಗೆ ಮಾಲಾರ್ಪಣೆಗೈದಿರುವು ದು ವಿಪರ್ಯಾಸ. ಈ ಹಿಂದೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದೆ ಎಂದು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸುಳ್ಳು ಹೇಳಿಕೆ ನೀಡಿರುವುದು ತೀರಾ ಹಾಸ್ಯಾಸ್ಪದವಾಗಿದೆ. ಈ ಬಗ್ಗೆ ಅವರು ಸೂಕ್ತ ದಾಖಲೆಯನ್ನು ಜನತೆಯ ಮುಂದೆ ಹಾಜರುಪಡಿಸಲಿ ಎಂದು ಕಿಶೋರ್ ಕುಮಾರ್ ಕುಂದಾಪುರ ಸವಾಲು ಹಾಕಿದ್ದಾರೆ.

ವಿದೇಶದ ಸ್ವಿಸ್ ಬ್ಯಾಂಕಿನಲ್ಲಿರುವ ಕಾಂಗ್ರೆಸ್ಸಿಗರ ಕಪ್ಪು ಹಣವನ್ನು ಭಾರತಕ್ಕೆ ತಂದರೆ ಪ್ರತಿಯೊಬ್ಬ ಭಾರತೀಯನ ಖಾತೆಗೆ ರೂ.15 ಲಕ್ಷದಂತೆ ಹಂಚುವಷ್ಟು ಹಣವಿರಬಹುದು’ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ತಿರುಚಿ ಹೆಗ್ಡೆ ಅಪಪ್ರಚಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!