ಶಿಳ್ಳೆಕ್ಯಾತ ಸಮುದಾಯಕ್ಕೆ ಉಚಿತ ನಿವೇಶನ ಸಹಿತ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ – ಸಂತೋಷ್ ಬಜಾಲ್
ಉಡುಪಿ ಮಾ.25: ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯಗಳ ಒದಗಿಸುವಂತೆ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು, ಡಿವೈಎಫ್ಐ ರಾಜ್ಯ ಮುಖಂಡರಾದ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.
ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಉಡುಪಿ ಜಿಲ್ಲೆಯ ಶಿಳ್ಳೆಕ್ಯಾತ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳು ಕಳೆದ ಹಲವು ವರುಷಗಳಿಂದ ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಗಳು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೆ ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಕ್ಕೆ ಸೇರಿರುವ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತವು ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದಡಿ ಘೋಷಿಸಿರುವ ಸವಲತ್ತುಗಳು ಈ ಸಮುದಾಯಗಳನ್ನು ತಲುಪುತ್ತಿಲ್ಲ. ಅಲೆಮಾರಿ ಸಮುದಾಯಗಳು ತಮ್ಮ ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿಲ್ಲದೆ ಸರಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ತಲತಲಾಂತರಗಳಿಂದ ಅಲೆಮಾರಿಯಾಗಿ ಬದುಕುತ್ತಿದ್ದ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಇವತ್ತು ತಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶಕ್ಕೆ ಒಂದೇ ಕಡೆ ನೆಲೆಯೂರಲು ಪ್ರಯತ್ನಿಸಿದರೂ ಅಂತಹ ಪ್ರಯತ್ನಕ್ಕೆ ಸರಕಾರಗಳು ಸ್ಪಂದಿಸದೆ ಅಲೆಮಾರಿ ಸಮುದಾಯಗಳ ವಿರೋಧಿಯಾಗಿ ವರ್ತಿಸುತ್ತಿದೆ. ಇನ್ನು ಸ್ಥಳೀಯರಿಂದ ಅನ್ಯರೆಂಬ ಅನುಮಾನಕ್ಕೂ ಅವಮಾನಕ್ಕೂ ಒಳಗಾಗಿ ದಿನನಿತ್ಯ ಕಿರುಕುಳ ದೌರ್ಜನ್ಯಗಳಿಗೆ ಒಳಗಾಗುವ ಹೀನಾಯ ಪರಿಸ್ಥಿತಿ ಉಂಟಾಗಿದೆ. ಈ ರೀತಿ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿರುವ ಬಡಜನ ವಿರೋಧಿ ಸರಕಾರಗಳ ವಿರುದ್ಧ ಮತ್ತು ಸಮುದಾಯದ ಮೇಲಾಗುವ ಕಿರುಕುಳ ದೌರ್ಜನ್ಯಗಳ ವಿರುದ್ಧ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಧ್ವನಿ ಎತ್ತಬೇಕಾಗಿದೆ ಮತ್ತು ಸಂಘಟಿತ ಹೋರಾಟ ನಡೆಸಲು ಮುಂದಾಗಬೇಕಾಗಿದೆ ಎಂದರು.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಯ ಮುಂದಾಳುಗಳಾದ ಎಚ್ ನರಸಿಂಹ ಮಾತನಾಡಿದರು. ಉಡುಪಿ ಜಿಲ್ಲಾ ಮೀನುಗಾರರು ಮತ್ತು ಮೀನು ಕಾರ್ಮಿಕರ ಸಂಘದ ಕಾರ್ಯದರ್ಶಿ ಕವಿರಾಜ್ ಕಾಂಚನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವೆಂಕಟೇಶ್, ಶಂಕರ, ಲೋಕೇಶ, ರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಸಭೆಯಲ್ಲಿ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯನ್ನು ರಚಿಸಲಾಯಿತು ಹಾಗೂ ಇದರ ಗೌರವಾಧ್ಯಕ್ಷರಾಗಿ ಕವಿರಾಜ್ ಕಾಂಚನ್ , ಅಧ್ಯಕ್ಷರಾಗಿ ಶಂಕರ, ಕಾರ್ಯದರ್ಶಿ ರಾಮ, ಕೋಶಾಧಿಕಾರಿಯಾಗಿ ಪ್ರಕಾಶ ಅವರನ್ನು ಆಯ್ಕೆಮಾಡಲಾಯಿತು. ಮತ್ತು 25 ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.