ಬೀದಿನಾಯಿಗೆ ಊಟ ಹಾಕಿದಕ್ಕಾಗಿ ದಲಿತ ಮಹಿಳೆಗೆ ಹಲ್ಲೆ- ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ
ಉಡುಪಿ, ಮಾ.23: ಬೀದಿನಾಯಿಗೆ ಊಟ ಹಾಕಿದ ಕಾರಣಕ್ಕಾಗಿ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಬಂಧಿತ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇಂದ್ರಾಳಿ ಹಯಗ್ರೀವ ನಗರದ ಚಂದ್ರಕಾಂತ ಭಟ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕುಂಜಿಬೆಟ್ಟು ಬುಡ್ನಾರ್ ನಿವಾಸಿ ಬೇಬಿ (50) ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಬಿ ಅವರು ತಮ್ಮ ಪರಿಚಯದ ಚಂದ್ರಕಾಂತ ಎಂಬವರ ಮನೆ ಸಮೀಪ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಈ ವೇಳೆ ಚಂದ್ರಕಾಂತ ನಾಯಿಗಳಿಗೆ ಊಟ ಹಾಕುವುದಕ್ಕೆ ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ರೀಪಿನಿಂದ ಬೇಬಿ ಅವರ ತಲೆಗೆ ಹೊಡೆದರೆಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಠಾಣಾ ಪೊಲೀಸರು ತನಿಖೆ ನಡೆಸಿ ಮಾ.21ರಂದು ಆರೋಪಿಯನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಇತ್ತ ಬಂಧಿತ ಆರೋಪಿಯನ್ನು ಉಡುಪಿ ಶಾಸಕರ ಒತ್ತಡದಿಂದ ಅನಾರೋಗ್ಯದ ನೆಪ ಹೇಳಿಕೊಂಡು ರಾತ್ರಿಯೇ ಜೈಲಿನಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರನ್ನು ಭೇಟಿ ಮಾಡಿ, ಯಾವುದೇ ಕಾರಣಕ್ಕೂ ಆರೋಪಿಯು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಹಾಗೂ ಪ್ರಥಮ ವರ್ತಮಾನ ವರದಿಯಲ್ಲಿ ಬಿಟ್ಟು ಹೋದ ಸೆಕ್ಷನ್ ಗಳನ್ನು ಸೇರಿಸಿಕೊಂಡು, ತನಿಖೆ ಮುಂದುವರಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
ಪ್ರಕರಣದ ತನಿಖಾಧಿಕಾರಿ ಉಡುಪಿ ಡಿವೈಎಸ್ಪಿ ಯವರನ್ನು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಬೇಬಿಯವರನ್ನು ಭೇಟಿ ಮಾಡಿ, ಬೇಬಿ ಅವರಿಗೆ ಧೈರ್ಯ ತುಂಬಲಾಯಿತು.
ಈ ನಿಯೋಗದಲ್ಲಿ ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಶಾಮರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ಶಾಮಸುಂದರ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಭಾಸ್ಕರ ಮಾಸ್ತರ್, ಮಂಜುನಾಥ ಹಳಗೇರಿ, ಸ್ಥಳೀಯ ನಗರಸಭಾ ಸದಸ್ಯ ರಾಜು ಹಾಗೂ ಪ್ರಾಣಿ ದಯಾ ಸಂಘಟನೆಯ ಪದಾಧಿಕಾರಿಗಳು ಜೊತೆಗಿದ್ದರು.