ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಮೀನು ಹಿಡಿಯಲು ನಿರ್ಬಂಧ, ದೌರ್ಜನ್ಯ ಎಸಗಿದವರ ಮೇಲೆ ಕ್ರಮಕ್ಕೆ ಒತ್ತಾಯ- ಸಂತೋಷ್ ಬಜಾಲ್
ಕುಂದಾಪುರ ಮಾ.18(ಉಡುಪಿ ಟೈಮ್ಸ್ ವರದಿ): ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಮೀನು ಹಿಡಿಯಲು ನಿರ್ಬಂಧ ಹೇರಿ ದೌರ್ಜನ್ಯ ಎಸಗಿದವರ ಮೇಲೆ ಜಿಲ್ಲಾಡಳಿತ ಮತ್ತು ಮೀನುಗಾರಿಕಾ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಕರಾವಳಿ ವೃತ್ತಿನಿರತ ಅಲೆಮಾರಿ (ಶಿಳ್ಳೆಕ್ಯಾತ) ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು, ಡಿವೈಎಫ್ಐ ರಾಜ್ಯ ಮುಖಂಡರಾದ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.
ಇಂದು ( 18-3-2024 ) ಗುಲ್ವಾಡಿ ಹೊಳೆ ಬದಿಯಲ್ಲಿ ದೌರ್ಜನ್ಯಕ್ಕೊಳಗಾದ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ಭೇಟಿ ನೀಡಿದ ಅಲೆಮಾರಿ ಸಂಘಟನೆಯ ನಾಯಕರುಗಳ ನಿಯೋಗ ಸ್ಥಳೀಯ ಅಲೆಮಾರಿ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಹಾಗೂಕುಂದಾಪುರದ ಗುಲ್ವಾಡಿ ಅಣೆಕಟ್ಟು ಬಳಿ ನದಿ ತೀರದಲ್ಲಿ ಕಳೆದ 40 ವರುಷಗಳಿಂದ ತೆಪ್ಪದ ಮೂಲಕ ಮೀನುಹಿಡಿದು ಜೀವಿಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ (ಬುಡಕಟ್ಟು) ಸಮುದಾಯಕ್ಕೆ ಸೇರಿದ 6 ಕುಟುಂಬಗಳಿಗೆ ಕಳೆದ ಕೆಲವು ದಿನಗಳಿಂದ ಸ್ಥಳೀಯ ಕೆಲವೊಂದು ವ್ಯಕ್ತಿಗಳು ಮೀನು ಹಿಡಿಯಲು ನಿರ್ಬಂಧ ಹೇರಿ ನಿರಂತರ ದೌರ್ಜನ್ಯ ನಡೆಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಕಳೆದ ಒಂದು ವಾರಗಳಿಂದ ಮೀನುಗಾರಿಕೆಗೆ ತೆರಳದಂತೆ ನಿರ್ಬಂಧ ಹೇರಿ ನಿರಂತರ ದೌರ್ಜನ್ಯ ನೀಡುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ, ಮತ್ತು ಮೀನುಗಾರಿಕಾ ಸಹಾಕಯ ನಿರ್ದೇಶಕರಿಗೆ ತಿಳಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಈ ಸಮುದಾಯ ನದಿಯಲ್ಲಿ ಅನುಮತಿ ಪಡೆದು ಮೀನು ಹಿಡಿಯಬೇಕು ಅಲ್ಲಿಯ ವರೆಗೆ ನದಿಗೆ ತೆರಳದ ಹಾಗೆ ನಿರ್ಬಂಧ ಹೇರಿರುವುದು ಮೀನುಗಾರಿಕೆ ಇಲಾಖೆಯ ನಿಯಮಗಳ ಉಲ್ಲಂಘನೆ. ನದಿ ನೀರಿನಲ್ಲಿ ತೆಪ್ಪದ ಮೂಲಕ ಮೀನು ಹಿಡಿಯಲು ಕಡ್ಡಾಯ ಪರವಾನಿಗೆ ಪಡೆಯುವ ಸರಕಾರದ ಯಾವುದೇ ನಿಯಮಗಳು ಜಾರಿಯಲ್ಲಿಲ್ಲ. ಹಾಗಿದ್ದು ಒತ್ತಾಯಿಸುತ್ತಿರುವುದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.
ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳಂತಹ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಅವರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಸಲುವಾಗಿಯೇ ಕರ್ನಾಟಕ ರಾಜ್ಯ ಸರಕಾರದಡಿಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮವೂ ರಚನೆಯಾಗಿವೆ. ಆದ್ದರಿಂದ ಜಿಲ್ಲಾಡಳಿತ ಈ ಕೂಡಲೇ ಉಡುಪಿ ಜಿಲ್ಲಾಧ್ಯಂತ ನದಿ ತೀರದ ಬಳಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಕ್ರಮಕೈಗೊಳ್ಳಬೇಕು ಹಾಗೂ ಗುಲ್ವಾಡಿ ಅಣೆಕಟ್ಟು ಬಳಿ ಸ್ಥಳೀಯರಿಂದ ದೌರ್ಜನ್ಯಕ್ಕೊಳಗಾಗುವ ಸಮುದಾಯಗಳಿಗೆ ರಕ್ಷಣೆಯನ್ನು ಒದಗಿಸಿ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೂ ಸಮಸ್ಯೆಗಳು ಬಗೆಹರಿಯದೆ ಹೋದಲ್ಲಿ ಮುಂದಿನ ದಿನ ಸಂಬಂಧಪಟ್ಟ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಕವಿರಾಜ್ ಎಸ್ ಕಾಂಚನ್, ಕಾರ್ಮಿಕ ಮುಖಂಡರಾದ ಜಿ.ಡಿ ಪಂಜು, ಅಲೆಮಾರಿ ಸಂಘಟನೆಯ ಜೊತೆ ಕಾರ್ಯದರ್ಶಿ ಲಕ್ಷ್ಮಣ, ರಾಮ, ಶಂಕರ ಮುಂತಾದವರು ಉಪಸ್ಥಿತರಿದ್ದರು.