ಭೂಗತ ಪಾತಕಿ ಛೋಟಾ ರಾಜನ್ ಗೆ ಕೊರೋನಾ ಸೋಂಕು ದೃಢ
ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಛೋಟಾ ರಾಜನ್ ನನ್ನು ಚಿಕಿತ್ಸೆಗಾಗಿ ತಿಹಾರ್ ಜೈಲಿನಿಂದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಛೋಟಾ ರಾಜನ್ ಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಎ.26 ರಂದು ತಿಹಾರ್ ಜೈಲಿನ ಅಧಿಕಾರಿ ನ್ಯಾಯಾಲಯಕ್ಕೆ ತಿಳಿದ್ದರು. ಆ ಪ್ರಕಾರ ಅನಾರೋಗ್ಯದ ಹಿನ್ನೆಲೆ ಕೊರೋನಾ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ ರಾಜನ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.
ಛೋಟಾ ರಾಜನ್ ವಿರುದ್ಧ ದಾಖಲಾಗಿರುವ 75 ಅಪರಾಧಗಳ ಪೈಕಿ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಮಹರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ತಲೆಮರೆಸಿಕೊಂಡಿದ್ದ ರಾಜನ್ನನ್ನು 2015ರಲ್ಲಿ ಇಂಡೋನೇಷ್ಯಾದ ಬಾಲಿ ಪೊಲೀಸರು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು. ಅಂದಿನಿಂದ ರಾಜನ್ ತಿಹಾರ್ ಜೈಲಿನಲ್ಲಿದ್ದು, ರಾಜನ್ ವಿರುದ್ಧ ಪ್ರಕರಣ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ರಾಜನ್ಗೆ ಕೋವಿಡ್ ಸೋಂಕು ತಗುಲಿದ್ದರಿಂದ ನಿನ್ನೆ ವಿಚಾರಣೆಗೆ ಹಾಜರು ಪಡಿಸಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.