ಉಡುಪಿ: ವಿವಿಧೆಡೆ ಅನಾರೋಗ್ಯದಿಂದ ಐವರು ಮೃತ್ಯು
ಉಡುಪಿ ಮಾ.12(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ವಿವಿಧ ಕಡೆ ಅನಾರೋಗ್ಯದಿಂದ ಅಸ್ವಸ್ಥಗೊಂಡು 5 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.
ಕಾಪುವಿನ ಪ್ರಶಾಂತ (44) ರವರು ನಿನ್ನೆ ಬೆಳಿಗ್ಗೆ ತಮ್ಮ ಮನೆಯಲ್ಲಿರುವಾಗ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದರು. ಈ ವೇಳೆ ತಕ್ಷಣ ಅವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಕಾಪುವಿನ ನಡ್ಸಾಲು ಗ್ರಾಮದ ಕಂಚಿನಡ್ಕ ಮಸೀದಿಯ ಹತ್ತಿರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಡುಬಿದ್ರೆಯ ಚಂದ್ರಹಾಸ (49) ಎಂಬುವವರು ನಿನ್ನೆ ಬೆಳಿಗ್ಗೆ ಹೃದಯಾಘಾತದಿಂದ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾರ್ಕಳದ ಸನ್ನು (70) ಇವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ನಿನ್ನೆ ಸಂಜೆ ತಮ್ಮ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿರುವಾಗ ಬಚ್ಚಲು ಮನೆ ಬಳಿ ಕುಸಿದು ಬಿದ್ದು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಕಾರ್ಕಳದ ಕನಾಂಜಾರು ಗ್ರಾಮದ ನಿವಾಸಿ ಕೆ.ಬಿ ಗಂಗಾಧರ್(44) ರವರು ಇಂದು ಬೆಳಿಗ್ಗೆ ಮನೆಯಿಂದ ಉಡುಪಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಯನ್ನು ಪಡೆಯಲು ಹೋಗುತ್ತಿರುವಾಗ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಹತ್ತಿರ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮಲ್ಪೆ ಠಾಣಾ ವ್ಯಾಪ್ತಿಯ ಗುಜರಿ ಹೆಕ್ಕಿ ಬಸ್ ಸ್ಟ್ಯಾಂಡ್ನ ವಠಾರದಲ್ಲಿ ಮಲಗುತ್ತಿದ್ದ ಜಗದೀಶ (55) ಎಂಬವರು ಅನಾರೋಗ್ಯದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ.
ಈ ಐದು ಘಟನೆಗೆ ಸಂಬಂಧಿಸಿದಂತೆ ಕಾಪು, ಪಡುಬಿದ್ರೆ, ಕಾರ್ಕಳ ಗ್ರಾಮಾಂತರ, ಮಲ್ಪೆ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.