ಉಡುಪಿ: ಮಾ.8-“ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶ”

ಉಡುಪಿ ಮಾ.6(ಉಡುಪಿ ಟೈಮ್ಸ್ ವರದಿ): ದೇಶದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲು ಉಡುಪಿಯಲ್ಲಿ ಎಸ್.ಡಿ.ಪಿ.ಐ ವತಿಯಿಂದ ಮಾರ್ಚ್‌ 8 ರಂದು ಮದ್ಯಾಹ್ನ 2.30 ಕ್ಕೆ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾ ಭವನದ ಹೊರಾಂಗಣದಲ್ಲಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐಯ ರಾಜ್ಯ ಮಾಧ್ಯಮ ಉಸ್ತುವಾರಿ  ರಿಯಾಝ್‌ ಕಡಂಬು ಅವರು ಹೇಳಿದ್ದಾರೆ. 

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,  ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಲ್ಲಿ ಪ್ರಜೆಗಳು ಜೀವಿಸುತ್ತಿರುತ್ತಾರೆ. ಆ ಸಂವಿಧಾನವೇ ಅಪಾಯಕ್ಕೆ ಸಿಲುಕಿದರೆ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ? ಅಂತಹ ವಿಷಮ ಸನ್ನಿವೇಶದಲ್ಲಿ ನಾವೆಲ್ಲ ಇಂದು ಬದುಕುತ್ತಿದ್ದೇವೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಪ್ರಜಾಪಭುತ್ವದ ಮೇಲೆ ಫ್ಯಾಸಿಸ್ಟ್‌ ಶಕ್ತಿಗಳು ನಡೆಸುತ್ತಿರುವ ಪ್ರಹಾರದ ವಿರುದ್ಧ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ನಾವು ಬೀಗುತ್ತೇವೆ ಆದರೆ ಸುಪ್ರೀಂಕೋರ್ಟ್‌ ತನ್ನ ಕೆಲಸ ಪಕ್ಕಕ್ಕಿಟ್ಟು ಮತ ಎಣಿಕೆ ಕಾರ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಚಂಡೀಗಡ ಮೇಯರ್‌ ಚುನಾವಣೆಯಲ್ಲಿ ಫ್ಯಾಸಿಸ್ಟ್‌ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಚುನಾವಣಾ ಅಧಿಕಾರಿಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಪರಿಣಾಮ ಇದು. ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಲು ಇದೊಂದೇ ಪ್ರಕರಣವಲ್ಲ, ನೂರಾರು ಉದಾಹರಣೆಗಳಿವೆ. ಮೋದಿ ಸರ್ಕಾರ ರೈತ ಚಳುವಳಿಯನ್ನು ಹತ್ತಿಕ್ಕುತ್ತಿರುವ ಕ್ರೌರ್ಯಭರಿತ ರೀತಿ, ಸರ್ವೋಚ್ಚ ನ್ಯಾಯಾಲಯ ಅಸಂವಿಧಾನಿಕ ಎಂದು ಜರಿದ ಚುನಾವಣಾ ಬಾಂಡ್‌ ಗಳ ಮೂಲಕ ಸಾವಿರಾರು ಕೋಟಿ ದೇಣಿಗೆ ಪಡೆದಿರುವುದು, ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಜೈಲಿಗೆ ಅಟ್ಟುತ್ತಿರುವುದು, ಪುಲ್ವಾಮ ದಾಳಿ ಹಾಗೂ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಸತ್ಯ ನುಡಿದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಸಿಂಗ್‌ ಅವರ ಮೇಲೆ ತನಿಖಾ ಸಂಸ್ಥೆಗಳ ದಾಳಿ, ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮೇಲೆ ಬುಲ್ಡೋಜರ್‌ ಹರಿಸುವ ಕ್ರೌರ್ಯ, ದಲಿತರು ಮತ್ತು ಆದಿವಾಸಿಗಳ ಮೇಲೆ ಹದ್ದು ಮೀರಿದ ದೌರ್ಜನ್ಯ, ವಿಪಕ್ಷಗಳ ಸರ್ಕಾರಗಳನ್ನು ಕಡೆವುವುದು, ಶಿಕ್ಷಣದ ಕೇಸರೀಕರಣ, ಒಂದೇ ಎರಡೇ ಪಟ್ಟಿ ಮಾಡುತ್ತಲೇ ಹೋಗಬಹುದು ಎಂದು ತಿಳಿಸಿದರು.

ಈ ದೇಶದ ಪ್ರಜೆಗಳಾಗಿ ನಾವು ನಿಭಾಯಿಸಬೇಕಾದ ಅತಿಮುಖ್ಯ ಜವಾಬ್ದಾರಿ ಎಂದರೆ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಮುಂದಾಗುವುದು. ಅದರ ಮೇಲೆ ನಡೆಯುತ್ತಿರುವ ಪ್ರಹಾರದ ವಿರುದ್ಧ ಸಂವಿಧಾನದ ಅಡಿಯಲ್ಲಿ ಸೆಡ್ಡುಹೊಡೆದು ನಿಂತು ಪ್ರತಿರೋಧ ಒಡ್ಡುವುದು. ಆ ಪ್ರತಿರೋಧದ ಭಾಗವಾಗಿ ಎಸ್.ಡಿ.ಪಿ.ಐ ಪಕ್ಷ ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶ ಹಮ್ಮಿಕೊಂಡಿದೆ. ಬನ್ನಿ, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಲು ಒಗ್ಗಟ್ಟಾಗಿ ನಿಲ್ಲೋಣ. ಆ ಮೂಲಕ ನಮ್ಮ ದೇಶವನ್ನು ಉಳಿಸಿಕೊಳ್ಳೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ‌ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವಾ, ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹನೀಫ್ ಮೂಲೂರು, ಮತ್ತು ಉಡುಪಿ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!