ನಾಟಕ, ಯಕ್ಷಗಾನಗಳು ಜನರನ್ನು ತಲುಪುವ ಪ್ರಮುಖ ಸಮೂಹ ಮಾಧ್ಯಮ: ಡಾ. ಸುರೇಶ್ ರೈ

ಉಡುಪಿ ಮಾ.2(ಉಡುಪಿ ಟೈಮ್ಸ್ ವರದಿ):‌ಯಕ್ಷಗಾನ, ನಾಟಕಗಳಿಗೆ ಹಿರಿಯರಷ್ಟೇ ಪ್ರೇಕ್ಷಕರಾಗಿ ಬರುವ ಬದಲು ಮಕ್ಕಳನ್ನು ಕೂಡ ಕರೆತರಬೇಕು. ಅವರಲ್ಲಿಯೂ ಕಲೆಯ ಬಗ್ಗೆ ಉತ್ಸಾಹವನ್ನು ಮೂಡಿಸಬೇಕು ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿಯ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾಟಕ, ಯಕ್ಷಗಾನಗಳು ಜನರನ್ನು ತಲುಪುವ ಪ್ರಮುಖ ಸಮೂಹ ಮಾಧ್ಯಮ. ಈ ಮಾಧ್ಯಮವನ್ನು ಎಲ್ಲರೂ ಬಳಸಿಕೊಳ್ಳಬೇಕು. ಮಕ್ಕಳು ಶಾಲೆಗೆ ಹೋಗುವ ಮೊದಲು ಯಾವುದೇ ಚಟುವಟಿಕೆಗೆ ಮಾರ್ಗದರ್ಶನ ಇರುವುದಿಲ್ಲ. ನೈಸರ್ಗಿಕವಾಗಿ ಕಲಿಯುತ್ತಾರೆ. ಅವರ ಅಭಿನಯವೂ ಸಹಜವಾಗಿರುತ್ತದೆ. ಅಂಥ ಮಕ್ಕಳನ್ನು ನಾಟಕಗಳಿಗೆ ಕರೆದುಕೊಂಡು ಬಂದರೆ ಅವರ ಮನಸ್ಸಿನಲ್ಲಿ ಈ ರಂಗಕಲೆ ಅಚ್ಚೊತ್ತಿ ಕೂರುತ್ತದೆ ಎಂದು ಹೇಳಿದರು.

ಸುಮನಸಾ ಸಂಸ್ಥೆಯು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸುತ್ತಿರುವುದಲ್ಲದೇ ಮಕ್ಕಳನ್ನೂ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಕಲಿಕೆಯು ಶಾಲೆಯ ಯಾವ ಬೋಧನಾ ಕ್ರಮದಲ್ಲಿಯೂ ಸಿಗಲಾರದು. ಯುವಜನರು ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ 60ಕ್ಕೂ ಅಧಿಕ ಯುವಜನರನ್ನು ಒಂದೆಡೆ ಸೇರಿಸಿಕೊಂಡು ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ನೀಡುತ್ತಾ, ಸಮಾಜದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಾ ಬಂದಿರುವುದು ಮಹತ್ವದ ಕೆಲಸ ಎಂದು ಶ್ಲಾಘಿಸಿದರು.

ಶಿಕ್ಷಣದ ಬಗ್ಗೆ, ರಂಗಶಿಕ್ಷಣದ ಬಗ್ಗೆ, ಸಮಾಜದ ಬಗ್ಗೆ ಚಿಂತನೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸುಮನಸಾ ಸಂಘಟನೆಯು ರಾಜ್ಯ ಮತ್ತು ದೇಶದ ವಿವಿಧ ಕಡೆಗಳಿಂದ ರಂಗತಂಡಗಳನ್ನು ಕರೆಸಿ ಅಲ್ಲಿನ ಸಾಂಸ್ಕೃತಿಕ ಜಗತ್ತನ್ನು ಇಲ್ಲಿನ ಜನರಿಗೆ ಪರಿಚಯಿಸುತ್ತಾ ಬಂದಿದೆ. ಪುಟ್ಟ ಮಕ್ಕಳಲ್ಲಿ ರಂಗಶಿಸ್ತು ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಎಲ್ಲಾ ರಂಗ ಸಂಘಟನೆಗಳಿಗೆ ಇದು ಮಾದರಿ ಎಂದು ಹೇಳಿದರು.

ಈ ವೇಳೆ ಕಲಾವಿದ ಗಣೇಶ ಕೊಲೆಕಾಡಿ ಅವರಿಗೆ ಯಕ್ಷಸುಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ‘ಸುಮನಸಾ’ ಕಲಾವಿದರಿಂದ ‘ಶಿಕಾರಿ’ ನಾಟಕ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಕಾರ್ತಿಕ್ ಗ್ರೂಪ್ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿಗಳಾದ ಉದಯ ಕುಮಾರ್,  ರಘುನಾಥ್ ಮಾಬಿಯಾನ್, ಗೌತಮ್ ಪ್ರಭು,ರತ್ನಾಕರ್ ಅಮೀನ್, ಇನ್ಫೊನಾ ಟೆಕ್ನಾಲಜಿಸ್ ಪ್ರವರ್ತಕ ಉಮೇಶ್ ಎಂ.ಕೆ., ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್‌ ಭಟ್‌, ‘ಸುಮನಸಾ’ದ ಗೌರವಾಧ್ಯಕ್ಷ ಎಂ. ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.

ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ರಾಧಿಕಾ ವಂದಿಸಿದರು. ಪ್ರಜ್ಞಾ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!