ಬೈಂದೂರು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ-ಇಬ್ಬರು ವಶ
ಬೈಂದೂರು ಫೆ.28(ಉಡುಪಿ ಟೈಮ್ಸ್ ವರದಿ):ಯಡ್ತರೆ ಗ್ರಾಮದ ಊದೂರು ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪುಕಲ್ಲು ಗಣಿಗಾರಿಕೆಗೆ ದಾಳಿ ಮಾಡಿದ ಪೊಲೀಸರು ಎರಡು ವಾಹನ ಸಹಿತ ಕೆಂಪು ಕಲ್ಲನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರು ಟಾಣಾ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಸ್ಥಳ ಪರಿಶೀಲನೆ ನಡೆಸಿದಾಗ ಸುಮಾರು 5 ಸೆಂಟ್ಸ್ ಜಾಗದಲ್ಲಿ ಸುಮಾರು 7 ಅಡಿ ಆಳದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ವಾಹನ ಚಾಲಕ ಉಪ್ಪುಂದ ಗ್ರಾಮದ ರಾಘವೇಂದ್ರ ಹಾಗೂ ಇನ್ನೋರ್ವ ತಗ್ಗರ್ಸೆ ಗ್ರಾಮದ ಅಣ್ಣಪ್ಪ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರ ಬಳಿ ಗಣಿಗಾರಿಕೆ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ತಿಳಿದು ಬಂದಿದೆ. ಈ ವೇಳೆ ಸ್ಥಳದಲ್ಲಿ ಇದ್ದ 2 ವಾಹನ ಮತ್ತು 4000 ರೂ. ಮೌಲ್ಯದ 200 ಕೆಂಪು ಕಲ್ಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.