ಚೆಕ್ ಬೌನ್ಸ್ ಪ್ರಕರಣ: ಆರೋಪಿಗೆ ಶಿಕ್ಷೆ
ಕಾರ್ಕಳ ಫೆ.26(ಉಡುಪಿ ಟೈಮ್ಸ್ ವರದಿ): ಚೆಕ್ ಬೌನ್ಸ್ನ ಪ್ರತ್ಯೇಕ 3 ಪ್ರಕರಣದ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಸಜೆಯನ್ನು ನೀಡಿ ಕಾರ್ಕಳ ನ್ಯಾಯಾಲಯವು ಆದೇಶಿಸಿದೆ.
ಮಡಾಮಕ್ಕಿ ಗ್ರಾಮದ ಕಾಸನಮಕ್ಕಿ ಕೊಡ್ಸನ್ ಬೈಲು ನಿವಾಸಿ ದಿನಕರ ಶೆಟ್ಟಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ.
ದಿನಕರ ನಾಗು ಶೆಟ್ಟಿ ಈತನಿಗೆ ಆತನ ಪರಿಚಯಸ್ಥ ನಾಡ್ಪಾಲು ಗ್ರಾಮದ ಬೈದೆ ಬೆಳಾರ ನಿವಾಸಿ ಶಿವರಾಮ ಪೂಜಾರಿ ಇವರು 2016ರಲ್ಲಿ 3 ತಿಂಗಳ ಮಟ್ಟಿಗೆ 3,32,000 ಹಣವನ್ನು ನೀಡಿದ್ದರು. ಹಾಗೂ ಮರುಪಾವತಿಗಾಗಿ ದಿನಕರ್ ಶೆಟ್ಟಿ 3 ಚೆಕ್ಕನ್ನು ನೀಡಿದ್ದ. ಆದರೆ ಬ್ಯಾಂಕಿನಲ್ಲಿ ಈ ಚೆಕ್ ಹಾಕಿದ್ದಾಗ ಅದು ಬೌನ್ಸ್ ಆಗಿತ್ತು. ಈ ಹಿನ್ನಲೆಯಲ್ಲಿ ಶಿವರಾಮ ಪೂಜಾರಿ ಕಾರ್ಕಳ ನ್ಯಾಯಾಲಯದಲ್ಲಿ ದಿನಕರ್ ಶೆಟ್ಟಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಕಾರ್ಕಳ ನ್ಯಾಯಾಲಯವು ಸುದೀರ್ಘವಾದ ವಿಚಾರಣೆ ನಡೆಸಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ದಿನಕರ್ ಶೆಟ್ಟಿಯನ್ನು ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿತು. ಹಾಗೂ ಇನ್ನು ಒಂದು ತಿಂಗಳ ಒಳಗೆ ಖರ್ಚು ವೆಚ್ಚಗಳು ಸೇರಿ 4,35,000 ಹಣವನ್ನು ಶಿವರಾಮ ಪೂಜಾರಿಯವರಿಗೆ ನೀಡಬೇಕು ತಪ್ಪಿದ್ದಲ್ಲಿ ಆರು ತಿಂಗಳ ಪ್ರತ್ಯೇಕ ಮೂರು ಪ್ರಕರಣಗಳು ಸೇರಿ ಒಟ್ಟು 18 ತಿಂಗಳ ಜೈಲು ಸಜೆಯನ್ನು ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಶಿವರಾಮ ಪೂಜಾರಿ ಪರ ನ್ಯಾಯವಾದಿ ಎಚ್. ರತನ್ ಕುಮಾರ್ ಹೆಬ್ರಿ ವಾದಿಸಿದ್ದಾರೆ.