ಉಳ್ಳಾಲ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಸುರತ್ಕಲ್‌ನಲ್ಲಿ ಸ್ಕೂಟರ್ ಪತ್ತೆ- ಲವ್‌ ಜೆಹಾದ್‌ ಆರೋಪ

ಉಳ್ಳಾಲ: ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಪಿಎಚ್‌ಡಿ ಸಂಶೋಧನ ಅಧ್ಯಯನ ನಡೆಸುತ್ತಿದ್ದ ಪುತ್ತೂರು ಮೂಲದ ಚೈತ್ರಾ (27) ನಾಪತ್ತೆ ಪ್ರಕರಣವನ್ನು ಲವ್‌ ಜೆಹಾದ್‌ ಎಂದು ಹಿಂದೂ ಸಂಘಟನೆಗಳು ಆರೋಪಿಸಿರುವ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೇ ವೇಳೆ ಚೈತ್ರಾ ಬಳಸುತ್ತಿದ್ದ ಸ್ಕೂಟರ್‌ ಸುರತ್ಕಲ್‌ನಲ್ಲಿ ಪತ್ತೆಯಾಗಿದೆ.

ಪೊಲೀಸರ 2 ತಂಡಗಳು ಹೊನ್ನಾವರ ಮತ್ತು ಬೆಂಗಳೂರಿನಲ್ಲಿ ಆಕೆಗೆ ಶೋಧ ಕಾರ್ಯ ಮುಂದುವರಿಸಿವೆ.

ಹೆತ್ತವರನ್ನು ಕಳೆದುಕೊಂಡಿದ್ದ ಚೈತ್ರಾ ಮಂಗಳೂರಿನ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ಪದವಿ ಶಿಕ್ಷಣ ಪಡೆದಿದ್ದರು. ಸ್ನಾತಕೋತ್ತರ ಪದವಿಯ ಬಳಿಕ ದೇರಳಕಟ್ಟೆಯ ಖಾಸಗಿ ವಿ.ವಿ.ಯ ಸಂಶೋಧನ ವಿಭಾಗದಲ್ಲಿ ಪಿಎಸ್‌ಡಿ ನಡೆಸುತ್ತಿದ್ದು, ಮಾಸಿಕ 40 ಸಾವಿರ ರೂ. ವಿದ್ಯಾರ್ಥಿವೇತನ ಪಡೆಯುತ್ತಿದ್ದರು. ಕೋಟೆಕಾರು ಮಾಡೂರಿನ ಬಾಡಿಗೆ ಮನೆಯಲ್ಲಿ ಸಹಪಾಠಿಗಳೊಂದಿಗೆ ವಾಸವಾಗಿದ್ದ ಈಕೆ ಫೆ. 17ರಂದು ನಾಪತ್ತೆಯಾಗಿದ್ದು, ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಸುರತ್ಕಲ್‌‌ನಲ್ಲಿ ಸ್ಕೂಟರ್‌ನಲ್ಲಿ ಪತ್ತೆ
ಫೆ. 17ರಂದು ಚೈತ್ರಾ ತನ್ನ ಸ್ಕೂಟರ್‌ನಲ್ಲಿ ಸುರತ್ಕಲ್‌ ವರೆಗೆ ತೆರಳಿದ್ದು, ಸ್ಕೂಟರ್‌ ಅಲ್ಲಿ ಪತ್ತೆಯಾಗಿದೆ. ಆಕೆಯ ಬ್ಯಾಂಕ್‌ ದಾಖಲೆಗಳನ್ನು ನೋಡಿದಾಗ ಸುರತ್ಕಲ್‌ನ ಎಟಿಎಂನಿಂದ 10 ಸಾವಿರದಂತೆ ನಾಲ್ಕು ಸಲ ಹಣ ಡ್ರಾ ಮಾಡಿದ್ದು, ಬಳಿಕ ಬಸ್‌ ಮೂಲಕ ಹೊರ ಜಿಲ್ಲೆಗೆ ತೆರಲಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈಕೆಯ ಸಂಬಂಧಿಕರು ಹೊನ್ನಾವರ ಕಡೆ ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರ ಒಂದು ತಂಡ ಹೊನ್ನಾವರಕ್ಕೆ ತೆರಳಿದ್ದರೆ, ಇನ್ನೊಂದು ತಂಡ ಬೆಂಗಳೂರಿಗೆ ತೆರಳಿತ್ತು.

ಬೆಂಗಳೂರಿನಲ್ಲಿ ಮೊಬೆೈಲ್‌ ಸಿಗ್ನಲ್‌ ಪತ್ತೆ?
ಚೈತ್ರಾ ಮೊಬೈಲ್‌ ಸಂಪರ್ಕದ ಆಧಾರದಲ್ಲಿ ಬೆಂಗಳೂರಿಗೆ ತೆರಳಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆಕೆ ಕಾಲ್‌ ಡಿಟೈಲ್ಸ್‌ನಲ್ಲಿ ಬೆಂಗಳೂರಿನಲ್ಲಿ ಯುವಕನೊಬ್ಬನನ್ನು ಸಂಪರ್ಕಿಸಿರುವ ಮಾಹಿತಿ ಲಭಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದ್ದು, ಆ ಆಧಾರದಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ.

ಸಂಘಟನೆಗಳ ಆರೋಪ
ಚೈತ್ರಾಳನ್ನು ಡ್ರಗ್ಸ್‌ ಜಾಲಕ್ಕೆ ಸಿಲುಕಿಸಿ ಲವ್‌ ಜೆಹಾದ್‌ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಮಾಡೂರಿನ ಮನೆಯಲ್ಲಿ ಹಿಂದೂ ಯುವತಿಯರೇ ವಾಸವಾಗಿದ್ದರು. ಚೈತ್ರಾ ಮತ್ತು ಇತರ ವಿದ್ಯಾರ್ಥಿನಿಯರು ಉಳಿದುಕೊಂಡಿದ್ದ ಮನೆಗೆ ಮುಸ್ಲಿಂ ಯುವಕ ಸೇರಿದಂತೆ ಇತರ ಯುವಕರು ಬರುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯರು ಬಜರಂಗ ದಳದ ಮುಖಂಡರಿಗೆ ತಿಳಿಸಿದ್ದರು. ಈ ಮನೆಗೆ ಡ್ರಗ್‌ ಪೆಡ್ಲರ್‌ ಆಗಿರುವ ಶಾರೂಕ್‌ ಡ್ರಗ್ಸ್‌ ಪೂರೈಸುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದು, ಆತ ಸೌದಿಯಲ್ಲೂ ಜೈಲಿನಲ್ಲಿದ್ದು ಬಂದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಮನೆಯವರಿಗೆ ಮಾಹಿತಿ
ಹಿಂದೂ ವಿದ್ಯಾರ್ಥಿನಿಯರು ಇರುವ ಮನೆಗೆ ಅನ್ಯ ಕೋಮಿನ ಯುವಕ ಬರುತ್ತಿರುವ ಮಾಹಿತಿಯಂತೆ ಸ್ಥಳೀಯ ಹಿಂದೂ ನಾಯಕರೊಬ್ಬರು ಚೈತ್ರಾ ಆವರ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಕುಟುಂಬದ ಸದಸ್ಯರು ಚೈತ್ರಾಳಲ್ಲಿ ವಿಚಾರಿಸಿದ ಬಳಿಕ ಆಕೆ ನಾಪತ್ತೆಯಾಗುವ ವರೆಗೆ ಹೊರಗಿನವರು ಯಾರೂ ಇತ್ತ ಸುಳಿದಿರಲಿಲ್ಲ. ಸಂಶೋಧನೆಯ ವಿದ್ಯಾರ್ಥಿವೇತನ ಬ್ಯಾಂಕ್‌ ಅಕೌಂಟ್‌ಗೆ ಬಂದ ಕೂಡಲೇ ಫೆ. 17ಕ್ಕೆ ಚೈತ್ರಾ ನಾಪತ್ತೆಯಾಗಿದ್ದಾರೆ. ಆಕೆಯನ್ನು ಪತ್ತೆಹಚ್ಚುವಂತೆ ಮೂರು ದಿನಗಳ ಗಡು ವಿಧಿಸಿದೆ. ಇಲ್ಲದಿದ್ದಲ್ಲಿ ಬಜರಂಗ ದಳ ಹೋರಾಟ ನಡೆಸಲಿದೆ ಎಂದು ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್‌ ಮಾಡೂರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಡ್ರಗ್‌ ಪೆಡ್ಲರ್‌ ಆರೋಪ ಹೊಂದಿರುವ ಯುವಕನೊಂದಿಗೆ ಸಂಪರ್ಕವಿರುವ ವಿಚಾರದಲ್ಲಿ ಆತನ ಮೊಬೈಲ್‌ಗೆ ಹಣವನ್ನು ಗೂಗಲ್‌ ಪೇ ಮೂಲಕ ಚೈತ್ರಾ ಕಳುಹಿಸಿರುವುದು ಪೊಲೀಸರು ಇನ್ನಷ್ಟು ಹೆಚ್ಚು ತನಿಖೆಗೆ ನಡೆಸಲು ಕಾರಣವಾಗಿದೆ.ಡ್ರಗ್ಸ್‌ ಜಾಲ ಸಕ್ರಿಯ
ದೇರಳಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಶೈಕ್ಷಣಿಕ ಕೇಂದ್ರವಾಗಿದ್ದು, ಹಾಸ್ಟೆಲ್‌ ವಿದ್ಯಾರ್ಥಿಗಳು ಸೇರಿದಂತೆ ಖಾಸಗಿ ಮನೆಗಳನ್ನು ಬಾಡಿಗೆ ಪಡೆದು ವಾಸಿಸುವ ವಿದ್ಯಾರ್ಥಿಗಳು, ಸ್ಥಳೀಯ ಪಿ.ಜಿ.ಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ಡ್ರಗ್‌ ಪೆಡ್ಲರ್‌ಗಳು ಕಾರ್ಯಾಚರಿಸುತ್ತಿದ್ದಾರೆ. ಕೇರಳ ಗಡಿಭಾಗದಲ್ಲಿರುವ ಈ ಪ್ರದೇಶಕ್ಕೆ ಮಾದಕ ದ್ರವ್ಯ ಅನಾಯಸವಾಗಿ ಪೂರೈಕೆಯಾಗುತ್ತಿದೆ.ಉಳ್ಳಾಲದಲ್ಲಿ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಧನ್ಯಾ ನೇತೃತ್ವದ ಆ್ಯಂಟಿ ಡ್ರಗ್‌ ಟೀಮ್‌ನ ಪೊಲೀಸರು ಹಲವು ಪ್ರಕರಣಗಳನ್ನು ಭೇದಿಸಿ ಹಲವರನ್ನು ವಶಕ್ಕೆ ತೆಗೆದುಕೊಂಡರೂ ಈ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ದೊಡ್ಡ ಮಟ್ಟದ ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗಿದೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ.

Leave a Reply

Your email address will not be published. Required fields are marked *

error: Content is protected !!