ಕುಂದಾಪುರ: ಇಸ್ಪೀಟು ಜುಗಾರಿ- 42,500 ರೂ. ಸಹಿತ ಐವರು ವಶಕ್ಕೆ
ಕುಂದಾಪುರ ಫೆ.24(ಉಡುಪಿ ಟೈಮ್ಸ್ ವರದಿ): ವಡೇರಹೋಬಳಿ ಗ್ರಾಮದ ಬಸ್ರೂರು ಮೂರುಕೈ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ಮಾಡಿದ ಪೊಲೀಸರು 42,500 ರೂ. ಸಹಿತ 5 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಬಸ್ರೂರು ಮೂರುಕೈ ಸಮೀಪ ಅಂಗಡಿ ಕಟ್ಟಡ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಠಾಣಾ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಸುಬ್ರಹ್ಮಣ್ಯ, ಸಚಿನ್, ಪ್ರಸಾದ್ , ಮೊಹಮ್ಮದ್ ಅನ್ನೀಶಾ, ಮೊಹಮ್ಮದ್ ಎಂಬ ಐವರನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಇದ್ದ ಜುಗಾರಿ ಆಟಕ್ಕೆ ಉಪಯೋಗಿಸಿದ 42,500/- ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.