ಕಾರ್ಕಳ: ಅರ್ಚಕ ನಾಪತ್ತೆ
ಕಾರ್ಕಳ ಫೆ.21(ಉಡುಪಿ ಟೈಮ್ಸ್ ವರದಿ): ಉಡುಪಿಗೆ ಹೋಗಿ ಬರುತ್ತೇನೆ ಎಂದು ಹೇಳಿದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ವಾಗೀಶ್ (31) ನಾಪತ್ತೆಯಾಗಿರುವವರು. ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದ ಇವರು ನಿನ್ನೆ ಮಧ್ಯಾಹ್ನದ ವೇಳೆ ತಮ್ಮ ತಾಯಿಯವರು ಕರೆ ಮಾಡಿದಾಗ ತಾನು ನಂದಳಿಕೆ ಗ್ರಾಮದ ನಂದಳಿಕೆ ಶ್ರೀ ಆದಿಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದು ಪೂಜೆ ಮುಗಿದ ಬಳಿಕ ಉಡುಪಿಗೆ ಹೋಗಿ ಬರುತ್ತೇನೆಂದು ತಿಳಿಸಿದ್ದರು. ಆದರೆ ಆ ಬಳಿಕ ವಾಗೀಶ್ ಅವರು ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಇತ್ತ ಫೋನ್ ಮಾಡಿದರೆ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂಬುದಾಗಿ ವಾಗೀಶ್ ಅವರ ತಾಯಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.