ಬಂಟ್ವಾಳ: ನಿರುದ್ಯೋಗದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ
ಬಂಟ್ವಾಳ ಫೆ.19 : ಪಾಣೆಮಂಗಳೂರಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ ಯುವಕನೋರ್ವನನ್ನು ಸ್ಥಳೀಯ ಯುವಕರ ತಂಡ ರಕ್ಷಿಸಿದೆ.
ಪುತ್ತೂರು ನಿವಾಸಿ ಆನಂದ ಎಂಬವರ ಪುತ್ರ ನಿಶ್ಚಿತ್ (25) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಎಂಎಸ್ಡಬ್ಲ್ಯೂ ಮಾಡಿರುವ ಇವರು ನಿರುದ್ಯೋಗಿಯಾಗಿದ್ದಾರೆ. ಸೂಕ್ತ ಕೆಲಸ ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ದ್ವಿಚಕ್ರ ವಾಹನವನ್ನು ಸೇತುವೆಯಾ ಬದಿಯಲ್ಲಿಟ್ಟು ನದಿಗೆ ಹಾರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಥಳೀಯ ಯುವಕರ ತಂಡ ಯುವಕನನ್ನು ನೀರಿಗೆ ಜಿಗಿಯದಂತೆ ತಡೆದು ರಕ್ಷಿಸಿದ್ದಾರೆ. ಆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.