ಮಣಿಪಾಲ: ಕ್ರೆಡಿಟ್ ಕಾರ್ಡ್ ಹೆಸರಲ್ಲಿ ವ್ಯಕ್ತಿಗೆ 1.57 ಲ.ರೂ. ವಂಚನೆ
ಮಣಿಪಾಲ ಫೆ.13(ಉಡುಪಿ ಟೈಮ್ಸ್ ವರದಿ): ಕ್ರೆಡಿಟ್ ಕಾರ್ಡ್ ಹೆಸರಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ 1.57 ಲಕ್ಷ ರೂ. ನಗದು ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಹೆರ್ಗಾ ಗ್ರಾಮದ ಜಹೀರ್ ಅಹಮ್ಮದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರಿಗೆ ನಿನ್ನೆ ಮಧ್ಯಾಹ್ನದ ವೇಳೆ ಅಪರಿಚಿತ ಯುವತಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಬೇಕಾ ಎಂದು ಕೇಳಿದ್ದಾರೆ. ಈ ವೇಳೆ ಜಹೀರ್ ಅಹಮ್ಮದ್ ಅವರು ನಿರಾಕರಿಸಿದಾಗ ಮತ್ತೊಮ್ಮೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ನ ಮೊತ್ತ ಇ.ವಿ.ಎಂ ಮೂಲಕ ಕಟ್ಟುತ್ತೀರಾ ಎಂದು ಕೇಳಿದಕ್ಕೆ ಹೌದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಜಹೀರ್ ಅಹಮ್ಮದ್ ಅವರ ಖಾತೆಯಿಂದ ಅವರಿಗೆ ಅರಿವಿಲ್ಲದೇ 1,57,000 ರೂ. ವರ್ಗಾವಣೆ ಆಗಿದೆ. ಅದರಂತೆ ಅಪರಿಚಿತ ವ್ಯಕ್ತಿಗಳು ಮೋಸ ಮಾಡುವ ಉದ್ದೇಶದಿಂದ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಜಹೀರ್ ಅಹಮ್ಮದ್ ಅವರ ಖಾತೆಯಿಂದ ಅಕ್ರಮವಾಗಿ 1,57,000 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.