ಲೋಕಸಭಾ ಚುನಾವಣೆ ತಯಾರಿ ಹೊತ್ತಲ್ಲೇ ಉಪ ಮುಖ್ಯಮಂತ್ರಿ ಡಿಕೆಶಿಗೆ ಹೊಸ ಸಂಕಷ್ಟ

ಬೆಂಗಳೂರು ಫೆ.6 : ಲೋಕಸಭಾ ಚುನಾವಣೆ ತಯಾರಿ ನಡೆಸಿರುವ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.

ಫೇಸ್‍ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಬಿ.ಆರ್.ನಾಯ್ಡು ವಿರುದ್ಧ ತನಿಖೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಫೋರ್ಜರಿ, ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸಿದ ಪೋಸ್ಟ್ ಹಾಕಿದ್ದಾರೆ ಎಂದು ಬಿಜೆಪಿ ಕಾನೂನು ಘಟಕ ನೀಡಿದ್ದ ದೂರಿನನ್ವಯ, ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

ನಾನು ಕರಸೇವಕ, ನನ್ನನ್ನೂ ಬಂಧಿಸಿ ಎನ್ನುವ ಬಿಜೆಪಿಯ ಅಭಿಯಾನದ ಪೋಸ್ಟರ್ ತಿರುಚಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾನೂನು ಪ್ರಕೋಷ್ಟ ಸಂಚಾಲಕ ಯೋಗೇಂದ್ರ ಹೊಡಾಘಟ್ಟ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ಗೆ ಖಾಸಗಿ ದೂರು ಸಲ್ಲಿಸಿದ್ದರು. ಈ ವಿಚಾರವಾಗಿ ಕೋರ್ಟ್ ಡಿಕೆ ಶಿವಕುಮಾರ್ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದು, ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸುವಂತೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಜಡ್ಜ್ ಜೆ.ಪ್ರೀತ್ ಸೂಚನೆ ನೀಡಿದ್ದಾರೆ.

ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಹಾಗೂ ಇದೇ ವೇಳೆ ಬಿಜೆಪಿ ನಾಯಕರು ನಾನು ಕರಸೇವಕ ನನ್ನನ್ನೂ ಬಂಧಿಸಿ ಅಭಿಯಾನವನ್ನು ಆರಂಭಿಸಿದ್ದರು. ಬಿಜೆಪಿಯ ಈ ಅಭಿಯಾನವನ್ನು ಕಾಂಗ್ರೆಸ್ ಲೇವಡಿ ಮಾಡಿದ್ದಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ಹಿರಿಯ ನಾಯಕರ ಪೋಟೋ ಬಳಸಿ ಕರ್ನಾಟಕ ಕಾಂಗ್ರೆಸ್ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಟ ಸಂಚಾಲಕ ಯೋಗೇಂದ್ರ ಹೊಡಾಘಟ್ಟ ಅವರು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಫೇಸ್‍ಬುಕ್ ಹ್ಯಾಂಡ್ಲರ್ ವಿರುದ್ಧ ಕೋರ್ಟ್‍ನಲ್ಲಿ ದೂರು ದಾಖಲು ಮಾಡಿದ್ದರು.

ಹಾಗೂ ಬಿಜೆಪಿ ನಾಯಕರ ಫೋಟೋಗಳನ್ನು ಎಡಿಟ್ ಮಾಡಿ ದುರ್ಬಳಕೆ ಮಾಡಲಾಗುತ್ತಿದೆ. ಆ ಮೂಲಕ ತಪ್ಪುದಾರಿಗೆಳೆಯುವ, ಫ್ಯಾಬ್ರಿಕೇಟೆಡ್ ಪೋಸ್ಟ್‍ಶೇವ್ ಪೋಸ್ಟ್ ಮಾಡಲಾಗುತ್ತಿದೆ. ಇಂತಹ ಪೋಸ್ಟ್‍ಗಳು ಘರ್ಷಣೆಯನ್ನು ಪ್ರಚೋದಿಸುವ ಮತ್ತು ಸಮಾಜದ ಕೆಲವು ವರ್ಗಗಳನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿವೆ. ಹೀಗಾಗಿ ಡಿಕೆ ಶಿವಕುಮಾರ್ ಮತ್ತು ಅವರ ಫೇಸ್‍ಬುಕ್ ಪುಟವನ್ನು ನಿರ್ವಹಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಯೋಗೇಂದ್ರ ಹೊಡಘಟ್ಟ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

Leave a Reply

Your email address will not be published. Required fields are marked *

error: Content is protected !!