ಸಾಕ್ಷ್ಯ ಸಿಗದ ರೀತಿಯಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಭ್ರಷ್ಟಾಚಾರ – ಉಡುಪಿ ವಕೀಲರ ಆರೋಪ
ಉಡುಪಿ, ಫೆ.5 : ಉಡುಪಿ ಉಪನೋಂದಾವಣೆ ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಕಚೇರಿಗಳಲ್ಲಿ ಸಾಕ್ಷ್ಯ ಸಿಗದ ಮಾದರಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉಡುಪಿಯ ವಕೀಲರು ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕೋರ್ಟ್ ಸಂಕೀರ್ಣದಲ್ಲಿ ಇಂದು ಆಯೋಜಿಸಲಾದ ಕರ್ನಾಟಕ ಉಪಲೋಕಾ ಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿಂದ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತ ವಕೀಲರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಕೀಲರು ಈ ಭ್ರಷ್ಟಾಚಾರದ ಬಗ್ಗೆ ಉಪಲೋಕಾ ಯುಕ್ತಯ ಬಳಿ ದೂರಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ರೋನಾಲ್ಡ್ ಪ್ರವೀಣ್ ಕುಮಾರ್ ಅವರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ಹೋದರೆ, ನೀವೇ ಟ್ರ್ಯಾಪ್ ಮಾಡಿ, ವಿಡಿಯೋ ಮಾಡಿ ಕೊಡಿ ಎಂದು ಹೇಳುತ್ತಾರೆ. ಆದರೆ ಈಗಿನ ಅಧಿಕಾರಿಗಳು ಯಾವ ಟ್ರ್ಯಾಪ್ ಸಿಗದ ರೀತಿಯಲ್ಲಿ ತಪ್ಪಿಸಿಕೊಳ್ಳುತ್ತಾರೆ. ಅವರು ಲಂಚ ಸ್ವೀಕಾರ ಮಾಡುವುದನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ. ಯಾರ ಮೇಲೂ ದೂರು ನೀಡಲು ಆಗದ ಪರಿಸ್ಥಿತಿಯಿದೆ. ಉಡುಪಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರದಿಂದ ಉತ್ತಮ ಸಾರ್ವಜನಿಕ ಸೇವೆಗೆ ಧಕ್ಕೆ ಆಗುತ್ತಿದ್ದು, ಇದಕ್ಕೆ ಪೂರ್ಣ ವಿರಾಮ ಹಾಕಲು ಲೋಕಾಯುಕ್ತ ಸಂಸ್ಥೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ವಕೀಲ ಶ್ರೀಧರ್ ಭಟ್ ಅವರು ಮಾತನಾಡಿ, ತಾಲೂಕು ಕಚೇರಿಯಲ್ಲಿ ಭೂಪರಿವರ್ತನೆಗಾಗಿ ಲಂಚ ಸ್ವೀಕರಿಸಲಾಗುತ್ತದೆ. ಸಂಜೆ ಐದು ಗಂಟೆಗೆ ಉಪನೋಂದಾಣಿ ಕಚೇರಿಗೆ ದಾಳಿ ಮಾಡಿದರೆ ದಿನಕ್ಕೆ 5ಲಕ್ಷ ರೂ.ವರೆಗೆ ಲಂಚದ ಹಣ ಸಿಗುತ್ತದೆ. ಇದನ್ನು ತಡೆಯದಿದ್ದರೆ ಈ ವೈರಸ್ ಇಡೀ ಸಮಾಜಕ್ಕೆ ವಿಸ್ತರಿಸುತ್ತದೆ ಎಂದು ಆರೋಪಿಸಿದರು.
ವಕೀಲರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಉಪಲೋಕಾಯುಕ್ತರು, ‘ನಾನು ಅಧಿಕಾರ ಸ್ವೀಕಾರ ಮಾಡಿ 23 ತಿಂಗಳಾಗಿವೆ. ನನಗೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಯಾವುದೇ ದೂರುಗಳಿದ್ದರೆ ನನ್ನ ಕಚೇರಿಗೆ ಬಂದು ನೀಡಿ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಲಂಚ ತೆಗೆದುಕೊಳ್ಳುವವರನ್ನು ನಮಗೆ ಹಿಡಿದು ಕೊಡಿ. ಇಲ್ಲವೇ ನೀವೇ ಟ್ರ್ಯಾಪ್ ಮಾಡಿ ಅಥವಾ ಸರಕಾರದ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಇನ್ನು ಈ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕರ್ನಾಟಕ ಉಪಲೋಕಾ ಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು, ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ವಕೀಲರ ಪಾತ್ರವೇ ಹೆಚ್ಚು. ವಕೀಲ ವೃತ್ತಿ ಎಲ್ಲಾ ವೃತ್ತಿಗಿಂತಲೂ ವಿಭಿನ್ನವಾದುದು. ವಕೀಲರು ಇಡೀ ಸಮಾಜಕ್ಕೆ ಅತೀ ಅವಶ್ಯಕವಾಗಿ ಬೇಕಾದ ಸಮುದಾಯವಾಗಿದೆ. ಯಾವುದೇ ಕಾನೂನು ರಚನೆಯಾಗುವ ಸಂದರ್ಭದಲ್ಲಿ ವಕೀಲರ ಪಾತ್ರ ಅತೀ ಮುಖ್ಯವಾಗಿ ಇರುತ್ತದೆ ಎಂದರು.
ಸರಕಾರ ಅಭಿವೃದ್ಧಿ ಯೋಜನೆಗಳು ಸಮಾಜದ ಜನಸಾಮಾನ್ಯರಿಗೆ ತಲುಪದೇ ಇದ್ದಾಗ ಅದನ್ನು ತಲುಪಿಸುವ ಜವಾಬ್ದಾರಿಯು ನ್ಯಾಯಾಂಗ ಹಾಗೂ ವಕೀಲರ ಮೇಲೆ ಇರುತ್ತದೆ. ವಕೀಲರು ತಮ್ಮ ಜ್ಞಾನವನ್ನು ಕೇವಲ ಕಾನೂನು ವಿಶ್ಲೇಷಣೆ ಮಾತ್ರವಲ್ಲದೆ ಸಮಾಜದ ಬೆಳವಣಿಗೆಗೂ ಬಳಸಿಕೊಳ್ಳಬೇಕು. ಆ ಮೂಲಕ ಸಮಾಜ ಅಭಿವೃದ್ಧಿಯಲ್ಲಿ ಭಾಗಿಗಳಾಗಬೇಕು ಎಂದು ಸಲಹೆ ನೀಡಿದರು.
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ರಾಜ್ಯ ಲೋಕಾಯುಕ್ತ ವಿಚಾರಣೆಗಳ ಉಪ ನಿಬಂಧಕ ಎಂ.ವಿ. ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ವಿಚಾರಣೆ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್,ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ವಕೀಲೆ ಸಹನಾ ಸೂಡ ಉಪಸ್ಥಿತರಿದ್ದರು.