ವೀಕೆಂಡ್ ಕರ್ಫ್ಯೂ ಏನಿದೆ? ಏನಿಲ್ಲ?

ಉಡುಪಿ ಎ.23 ( ಉಡುಪಿ ಟೈಮ್ಸ್ ವರದಿ) : ಕೊರೋನಾ ವಾರಾಂತ್ಯದ ಕರ್ಫ್ಯೂ ನಲ್ಲಿ ಜನರಿಗೆ ಏನೇನು ದೊರೆಯುತ್ತದೆ ಎಂಬ ಗೊಂದಲವಿದ್ದು ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸ್ಪಷ್ಟನೆ ನೀಡಿದ್ದು ಅದರಂತೆ .
ಎಲ್ಲಾ ಸಿನೆಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಜಿಮ್ ಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜುಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್ ,ಚಿತ್ರಮಂದಿರಗಳು, ಬಾರ್ ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‍ಗಳು ಮತ್ತು ಇಂತಹ ಇತರ ಸ್ಥಳಗಳನ್ನು ಮುಚ್ಚಲಾಗುತ್ತದೆ.

ನ್ಯಾಯಬೆಲೆ ಅಂಗಡಿಗಳು, ಕಿರಾಣಿ ಅಂಗಡಿಗಳು , ದಿನಸಿ ಅಂಗಡಿಗಳು , ಹಣ್ಣು ಮತ್ತು ತರಕಾರಿ ಅಂಗಡಿಗಳು, ಡೈರಿ ಮತ್ತು ಹಾಲಿನ ಬೂತ್‍ಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳಿಗೆ ತೆರೆಯಲು ಬೆಳಿಗ್ಗೆ 10 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಸಗಟು ತರಕಾರಿ / ಹಣ್ಣು / ಹೂವು ಮಾರುಕಟ್ಟೆಗಳಿಗೆ ಬಯಲು ಪ್ರದೇಶ / ಆಟದ ಮೈದಾನಗಳಲ್ಲಿ ಮಾರಟ ಮಾಡಲು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಅನುಮತಿಸಿದೆ. ಆದರೆ ಸ್ಥಳಾಂತರ ಪ್ರಕ್ರಿಯೆಗಳನ್ನು ಏಪ್ರಿಲ್ 23ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ರೆಸ್ಟೋರೆಂಟ್ ಗಳು ಮತ್ತು ಉಪಹಾರ ಗೃಹಗಳಿಗೆ ,ಪಾರ್ಸೆಲ್ ಸೇವೆಗಳನ್ನು ರಾತ್ರಿ 9 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ , ವಸತಿ ಸೌಕರ್ಯದ ಹೊಟೇಲ್ ಗಳಿಗೆ ಅತಿಥಿ ಸೇವೆ ನೀಡಲು ಮಾತ್ರವೇ ಅನುಮತಿ ನೀಡಲಾಗಿದೆ.

ಎಲ್ಲಾ ಆಹಾರ ಸಂಸ್ಕರಣೆ ಮತ್ತು ಅದಕ್ಕೆ ಸಂಬಂಧಿತ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗಳಿಗೆ ಅನುಮತಿ ಕಲ್ಪಿಸಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಅನುಮತಿಸಲಾಗಿದೆ. ಇ-ಕಾಮರ್ಸ್ ಸೇವೆಗಳ ಮುಖಾಂತರ ಎಲ್ಲಾ ವಸ್ತುಗಳ ವಿತರಣೆಗೆ ಅನುಮತಿಸಿದೆ.
ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿಯು ಅಧಿಸೂಚಿಸಿದ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳಿಗೆ ಅನುಮತಿಸಿದೆ. ಶೈತ್ಯಾಗಾರಗಳು ಮತ್ತು ಉಗ್ರಾಣ ಸೇವೆಗಳಿಗೆ ಅವಕಾಶವಿರುತ್ತದೆ. ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿಸಲಾಗಿದೆ.
ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳನ್ನು ತೆರೆಯಲು ಅನುಮತಿಸಲಾಗಿದೆ.
ಮೇಲೆ ಸೂಚಿಸಲಾದ ಅಂಶಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳು / ವಾಣಿಜ್ಯ / ಖಾಸಗಿ ಕಾರ್ಯಸಂಸ್ಥೆಗಳು ಮುಚ್ಚಲ್ಪಡುತ್ತವೆ. ಎಲ್ಲಾ ಸಂಸ್ಥೆಗಳು, ಸಂಸ್ಥೆಯ ನೌಕರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ದತಿಯನ್ನು ಪ್ರೋತ್ಸಾಹಿಸಬೇಕು.


ಕಂಟೈನ್ ಮೆಂಟ್ ವಲಯಗಳ ಹೊರಗಿನ ಎಲ್ಲಾ ಕೃಷಿ (ಬೇಸಾಯ)/ಸಂಬಂಧಿತ ಚಟುವಟಿಕೆಗಳಿಗೆ ಪೂರಕವಾಗಿ ಅಗತ್ಯವಿರುವ ಸಾಮಾಗ್ರಿಗಳನ್ನು ಪೂರೈಸುವ ಅಂಗಡಿಗಳು ಮತ್ತು ದಾಸ್ತಾನು ಮಳಿಗೆಗಳಿಗೆ/ಕೃಷಿ ಯಂತ್ರದಾರಿಕೆಗಳಿಗೆ ಅನುಮತಿ ನೀಡಲಾಗಿದೆ
ಈ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು ಅಥವಾ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಒಟ್ಟಿನಲ್ಲಿ ನಾಳೆ ಸಂಪೂರ್ಣ ಜನರ ಸಂಚಾರವನ್ನ ನಿಷೇದಿಸಲಾಗಿದೆ. ದಯವಿಟ್ಟು ಯಾರು ಅನಾವಶ್ಯಕವಾಗಿ ತಿರುಗಾಡಬಾರದಾಗಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!