ಉಡುಪಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಹೃದಯಾಘಾತ -ವ್ಯಕ್ತಿ ಮೃತ್ಯು
ಉಡುಪಿ ಜ.30(ಉಡುಪಿ ಟೈಮ್ಸ್ ವರದಿ): ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ-ಶಿವಮೊಗ್ಗ ರಾಜ್ಯ ರಸ್ತೆಯ ಸಿದ್ದಾಪುರ ಗ್ರಾಮದ ಜನ್ಸಾಲೆ ಬಳಿ ನಡೆದಿದೆ.
ಉಡುಪಿಯಿಂದ ದಾವಣಗೆರೆಗೆ ಪ್ರಯಾಣಿಸುತ್ತಿದ್ದ ಗದಗ ಜಿಲ್ಲೆಯ ಚಂದ್ರು (24) ಮೃತಪಟ್ಟವರು. ಇವರು ಉಡುಪಿಯಿಂದ ದಾವಣಗೆರೆಗೆ ಹೋಗಲು ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ ಜ.28 ರ ರಾತ್ರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕುಂದಾಪುರ ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಿದ್ದಾಪುರ ಗ್ರಾಮದ ಜನ್ಸಾಲೆ ಬಳಿ ನಿನ್ನೆ ಬೆಳಿಗ್ಗೆ 1:40ರ ಸುಮಾರಿಗೆ ಚಂದ್ರು ಅವರು ಒಮ್ಮೇಲೆ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಯಲ್ಲಿ ಚಂದ್ರು ಅವರನ್ನು ಪರೀಕ್ಷಿಸಿದ ವೈದ್ಯರು ಚಂದ್ರು ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಚಂದ್ರು ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.