ಬಡಗಬೆಟ್ಟು ಕ್ರೆಡಿಟ್ ಕೋ-ಆ.ಸೊಸೈಟಿ 11 ನೇ ಕಾರ್ಕಳ ಶಾಖೆ ಉದ್ಘಾಟನೆ

ಕಾರ್ಕಳ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ನೂತನ ಹವಾನಿಯಂತ್ರಿತ ಕಾರ್ಕಳ ಶಾಖೆಯು ಶುಕ್ರವಾರ ಕಾರ್ಕಳ ಅನಂತಶಯನ ರಸ್ತೆಯ ವಿಕಾಸ್ ಟವರ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಶಾಖೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡುಬಿದ್ರಿ ಜೈನ ಮಠದ ಸ್ವಸ್ತಿ ಶ್ರೀಚಾರುಕೀರ್ತಿ ಪಂಡಿತಾಚಾರ್ಯ ಮಹಾ ಸ್ವಾಮಿ ಆಶೀರ್ವಚನ ನೀಡಿ, ಹಿಂದೆ ಕೂಡ ಸಹಕಾರ ತತ್ವ ಅಡಿಯಲ್ಲಿಯೇ ವ್ಯಾಪಾರ ವ್ಯವಹಾರ ನಡೆಯುತ್ತಿದ್ದು, ಜನರ ಕಷ್ಟಗಳನ್ನು ದೂರ ಮಾಡುವ ಉದ್ದೇಶದಿಂದ ಸುಮಾರು 100 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸೊಸೈಟಿ ಇದೀಗ ಬೆಳೆಯುತ್ತ ಶಾಖೆಗಳನ್ನು ವಿಸ್ತರಿಸಿಕೊಂಡು ಹೋಗಿದೆ. ಜನರ ಬದುಕಿಗೆ ಆಶ್ರಯವಾಗಿರುವ ಈ ಸೊಸೈಟಿ ಇದೀಗ ತಮ್ಮ ಸೇವೆಯನ್ನು ಕಾರ್ಕಳಕ್ಕೂ ವಿಸ್ತರಿಸಿದೆ ಎಂದರು.

ಒಬ್ಬರಿಗೊಬ್ಬರು ಪರಸ್ಪರ ಸಹಕಾರ ಕೊಟ್ಟು ಸಣ್ಣ ಉದ್ಯಮದಿಂದ ದೊಡ್ಡ ಸೇವಾ ರಂಗಗಳ ವ್ಯಕ್ತಿತ್ವಕ್ಕೂ ಶಕ್ತಿ ತುಂಬುವ ಕಾರ್ಯವನ್ನು ಈ ಸೊಸೈಟಿ ಮಾಡಲಿ. ಅಲ್ಲದೆ ಬಡಗಬೆಟ್ಟು ಸೊಸೈಟಿ ಎಲ್ಲರ ಪಾಲಿನ ಕಲ್ಪವೃಕ್ಷ ಕಾಮಧೇಮವಾಗಲಿ ಎಂದು ಅವರು ಶುಭಹಾರೈಸಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಕಳ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪ ಟಿ.ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಉದ್ಯಮಿ ಪುರುಷತ್ತೋಮ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ವ್ಯವಸ್ಥಾಪಕ ಸಚಿನ್ ಕುಮಾರ್ ವಂದಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಕಲರ್ಸ್ ಕನ್ನಡ ವಾಹಿನಿ ಎದೆ ತುಂಬಿ ಹಾಡುವೆನು ಸ್ಪರ್ಧೆಯ ರನ್ನರ್‌ಅಪ್ ಹಾಗೂ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ವಿಜೇತ ಸಂದೇಶ್ ನೀರುಮಾರ್ಗ ಹಾಗೂ ತಂಡದವರಿಂದ ಗಾನ ಮಾಧುರ್ಯ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!