“ಅಗೌರವವಲ್ಲ, ಅದು ಆತ ವಿಶ್ರಾಂತಿ ಪಡೆಯುವ ರೀತಿ” : ಮಾರ್ಷ್ ಪರ ಬ್ಯಾಟಿಂಗ್ ಮಾಡಿದ ನಟ ಚೇತನ್
ಬೆಂಗಳೂರು: ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ತಮ್ಮ ತಂಡ ಗೆದ್ದ ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ತೋರಿಸಿದ್ದರು. ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾರ್ಷ್, ತನಗೆ ಸಿಕ್ಕ ಮೆಡೆಲ್ ಕೊರಳಿಗೆ ಹಾಕಿಕೊಂಡು ವಿಶ್ವಕಪ್ ಮೇಲೆ ಕಾಲು ಚಾಚಿ ಕುಳಿತ ಫೋಟೊ ವೈರಲ್ ಆಗಿದೆ. ಈ ಬಗ್ಗೆ ಕೂಡ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಬಗ್ಗೆ ಚೇತನ್ ಅಹಿಂಸಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟಿರುವ ಚಿತ್ರದೊಂದಿಗೆ ಆಸ್ಟ್ರೇಲಿಯಾದ ಕ್ರಿಕೆಟಿಗನೊಬ್ಬ ಸುದ್ದಿಯಲ್ಲಿದ್ದಾರೆ. ಬಲಗೈ ಮತ್ತು ಎಡಗೈ ಅಥವಾ ತಲೆ ಮತ್ತು ಕಾಲುಗಳಂತಹ ದೇಹದ ಭಾಗಗಳು ‘ಶುದ್ಧ ಅಥವಾ ಅಶುದ್ಧವಾಗಿವೆ’ ಎಂಬ ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯ ಕಲ್ಪನೆಯು ಭಾರತೀಯ ಬಹುಸಂಖ್ಯಾತ ಸಂಸ್ಕೃತಿಯಾಗಿದೆ.
ಪಶ್ಚಿಮದಲ್ಲಿ, ಜನರು ಮನೆಯೊಳಗೆ ಮತ್ತು ಮಲಗುವ ಕೋಣೆಯಲ್ಲಿಯೂ ಶೂಗಳನ್ನು ಧರಿಸುತ್ತಾರೆ. ಆಸ್ಟ್ರೇಲಿಯಾದ ಆಟಗಾರನಿಗೆ, ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ ಅದು ಕೇವಲ ಅವರ ವಿಶ್ರಾಂತಿ ಆಗಿತ್ತು ಎಂದು ಚೇತನ್ ಸಮರ್ಥಿಸಿಕೊಂಡಿದ್ದಾರೆ.
ಗರಂ ಆದ ನೆಟ್ಟಿಗರು : ಈ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಭಾರತ ಭಾವನಾತ್ಮಕ ಪ್ರಪಂಚ ನಿಮ್ಮ ಪಾಶ್ಚಿಮಾತ್ಯ ಪರಂಪರೆಯ ಅನರ್ಥಗಳನ್ನು ಇಲ್ಲಿ ಹೇರಬೇಡಿ ಚೇತನ್. ಪಾಶ್ವಾತ್ಯರು ತಮ್ಮ ಜೀವಿತಾವಧಿಯಲ್ಲಿ ನಾಲ್ಕಾರು ಸಂಗಾತಿಗಳೊಂದಿಗೆ ಬದುಕುತ್ತಾರೆ ಅಂತಹವುಗಳನ್ನೆಲ್ಲಾ ನಿಮ್ಮಂತಹವರು ಸ್ವೇಚ್ಛಾಚಾರ ಎಂದು ಬಣ್ಣಿಸುತ್ತೀರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.