ತಾಯಿ, ಮಗು ಬಲಿ ಪಡೆದ ವಿದ್ಯುತ್ ಅವಘಡ, ನೈತಿಕ ಹೊಣೆ ಹೊತ್ತು ಇಂಧನ ಸಚಿವರು ರಾಜೀನಾಮೆ ನೀಡಲಿ : ಆರ್ ಅಶೋಕ್

ಬೆಂಗಳೂರು, ನ.22: ತಾಯಿ, ಮಗು ಬಲಿ ಪಡೆದ ವಿದ್ಯುತ್ ಅವಘಡ ಪ್ರಕರಣದ ಬಗ್ಗೆ ಸಬೂಬುಗಳನ್ನು ಹೇಳುವುದನ್ನು ಬಿಟ್ಟು ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕೊರತೆಯೇ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೂ, ಹೊಣೆಗಾರಿಕೆಯಿಂದ ನುಣುಚಿಕೊಂಡು ಸಂವೇದನಾರಹಿತರಾಗಿ ಸಚಿವ ಜಾರ್ಜ್ ವರ್ತಿಸುತ್ತಿರುವುದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ವೈರ್ ಗಳಿಗೆ ಇಲಿ ಕಚ್ಚಿ ಘಟನೆ ಸಂಭವಿಸಿದೆ ಎಂಬ ನೆಪ ಹೇಳಿ ತಿಪ್ಪೆ ಸಾರಿಸುವ ಮಟ್ಟಕ್ಕೆ ಸಚಿವರು ಇಳಿದಿರುವುದು ನೀಚತನದ ಪರಮಾವಧಿ ಎಂದು ಅವರು ಕಿಡಿ ಕಾರಿದ್ದಾರೆ.

ತನಿಖೆಗೆ ನಾಲ್ಕು ಸಮಿತಿ ರಚಿಸಿರುವುದಾಗಿ ಜಾರ್ಜ್ ಅವರೇ ಹೇಳಿದ್ದಾರೆ. ತನಿಖೆ ಮುಗಿದು ವರದಿ ಕೈ ಸೇರುವ ಮೊದಲೇ ಇಲಿ ಮೇಲೆ ಎತ್ತಿ ಹಾಕುತ್ತಿರುವ ಹಿಂದಿನ ಉದ್ದೇಶವಾದರೂ ಏನು? ತನಿಖೆಯ ಹಾದಿ ತಪ್ಪಿಸುವ ಯತ್ನ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಹೀಗೆಯೇ ವರದಿ ನೀಡಲಿ ಎಂದು ಪರೋಕ್ಷವಾಗಿ ತನಿಖಾ ಸಮಿತಿಗಳ ಮೇಲೆ ಒತ್ತಡ ಹೇರಿದಂತೆ ಅಗುವುದಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಸಿಎಂ ಮಧ್ಯ ಪ್ರವೇಶಕ್ಕೆ ಆಗ್ರಹ

ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸುವುದು ಸರಿಯಲ್ಲ. ತಕ್ಷಣವೇ ಮಧ್ಯ ಪ್ರವೇಶಿಸಿ ಸಚಿವ ಜಾರ್ಜ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಬ್ರಾಂಡ್ ಬೆಂಗಳೂರು ಹಣೆಪಟ್ಟಿಗೆ ಕಪ್ಪು ಚುಕ್ಕೆಯಾಗಿರುವ ಈ ಪ್ರಕರಣದಲ್ಲಿ ತಾಯಿ ಮಗುವಿನ ಸಾವಿಗೆ ನ್ಯಾಯ ಸಿಗಬೇಕು ಮತ್ತು ನಿಷ್ಪಕ್ಷ ತನಿಖೆ ನಡೆಯಬೇಕಿದ್ದರೆ ಸಚಿವ ಸ್ಥಾನದಲ್ಲಿ ಜಾರ್ಜ್ ಮುಂದುವರಿಯಬಾರದು ಎಂದು ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಬ್ರಾಂಡ್ ಬೆಂಗಳೂರು ಮಾಡ್ತೀವಿ, ಜಾಗತಿಕ ಮಟ್ಟದಲ್ಲಿ ನಗರದಲ್ಲಿ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು? ಇದೇನಾ ನಿಮ್ಮ ಗ್ಲೋಬಲ್ ಡೆವಲಪ್ಮೆಂಟ್ ಎಂದು ವ್ಯಂಗ್ಯ ಮಾಡಿದ್ದಾರೆ.

ನ್ಯಾಯ ಸಿಗುವ ತನಕ ಹೋರಾಟ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೊಲೆಗಡುಕ ಸರಕಾರದ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು. ಇಂಧನ ಸಚಿವರ ರಾಜೀನಾಮೆ ಪಡೆದು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಮೃತರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವ ತನಕ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!