ಮಂಗಳೂರು: ಅಂತರ್ ರಾಜ್ಯ ಕಳ್ಳರ ಬಂಧನ
ಮಂಗಳೂರು(ಉಡುಪಿ ಟೈಮ್ಸ್ ವರದಿ): ಅಂತರ್ ರಾಜ್ಯ ಮನೆಕಳವು, ದರೋಡೆ, ವಾಹನ ಸವಾರರನ್ನು ತಡೆದು ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯನ್ನು ದ.ಕ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಝಬೇರ್, ಇಬ್ರಾಹಿಂ ಲತೀಫ್, ರಾಜೇಶ್, ಅರ್ಜುನ್, ಮೋಹನ್, ಬೋಳಿಯಾರ್ ಮನ್ಸೂರ್ ಬಂಧಿತ ಆರೋಪಿಗಳು.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಈಗ ಮತ್ತೆ 6 ಮಂದಿಯ ಬಂಧನ ಮಾಡಲಾಗಿದೆ. ಅಲ್ಲದೆ ಬಂಧಿತರಿಂದ ಇನ್ನೊವಾ ಕ್ರಿಸ್ಟ್, ಇನೊವಾ, ಐ 20 ಕಾರು ಸೇರಿದಂತೆ ಒಟ್ಟು ರೂ. 41.82 ಲಕ್ಷ ಮೌಲ್ಯದ ಸ್ವೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಪುಂಜಾಲಕಟ್ಟೆ, ಮಂಗಳೂರು ನಗರದ ಮೂಡುಬಿದಿರೆ, ಮೂಲ್ಕಿ, ಬಜಪೆ, ಹಾಸನ ಜಿಲ್ಲೆಯ ಹರೆಹಳ್ಳಿ, ಬೆಂಗಳೂರು ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ, ಮನೆಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಭಾಗಿಯಾಗದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿವೆ. ಅಂತರ ರಾಜ್ಯದಲ್ಲಿಯೂ ಈ ತಂಡದ ಆರೋಪಿಗಳು ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಒಟ್ಟು 28 ಪ್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿವೆ ಎಂದು ಅವರು ತಿಳಿಸಿದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ವಾರಗಳ ಕಾಲ ತನಿಖೆ ನಡೆಸಲಾಗುತ್ತದೆ. ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ತಂಡದಲ್ಲಿ 50 ರಿಂದ 60 ಮಂದಿ ಇದ್ದಾರೆ. ಆರೋಪಿತರ ವಿರುದ್ಧ ಗೋ ಕಳವು ಪ್ರಕರಣಗಳು ಕೂಡ ದಾಖಲಾಗಿದ್ದು, ಈ ಪ್ರಕರಣದಲ್ಲಿ ಬಂಧನ ಮಾಡಿರುವ ಆರೋಪಿಗಳ ತನಿಖೆ ಮುಂದುವರೆದಿದೆ. ಇವರ ಕೃತ್ಯಕ್ಕೆ ವಾಹನ, ಹಣಕಾಸಿನ ನೆರವು, ತಲೆಮರೆಸಿಕೊಳ್ಳಲು ಸಹಾಯ ಮಾಡಿದವರನ್ನು ಕೂಡ ತನಿಖೆಗೆ ಒಳಪಡಿಸಲಾಗುತ್ತದೆ ಎಂದರು
ಇದೇ ವೇಳೆ ಕಳ್ಳರ ಈ ತಂಡವನ್ನು ಪತ್ತೆ ಮಾಡಿದ ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಮತ್ತು ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರ ತಂಡದ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.