ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತವಾದರೆ ಉಡುಪಿ ಇಡೀ ದೇಶದಲ್ಲೆ ಮಾದರಿ ನಗರವಾಗಲಿದೆ: ಜಿಲ್ಲಾಧಿಕಾರಿ

ಉಡುಪಿ, ಎ.15(ಉಡುಪಿ ಟೈಮ್ಸ್ ವರದಿ): ಉಡುಪಿ ಮಣಿಪಾಲ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸುವ ಯೋಜನೆ ಕಾರ್ಯಗತವಾದರೆ ಉಡುಪಿ ನಗರ ಇಡೀ ದೇಶದಲ್ಲೆ ಮಾದರಿ ನಗರವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಇಂದು ಜಿಲ್ಲಾ ಪತ್ರಿಕಾ ಭವನದಲ್ಲಿ, ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ ಮೊದಲ ತಿಂಗಳ ಸಂವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ಮಣಿಪಾಲವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಉದ್ದೇಶದಿಂದ. ದೊಡ್ಡ ನಗರಗಳಲ್ಲೂ ಆಗದ ರೀತಿಯಲ್ಲಿ ಉಡುಪಿ ಮಣಿಪಾಲದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತ ಗೊಳಿಸಲು ಯೋಜನೆ ಸಿದ್ದವಾಗಿದೆ. ಈ ಪರಿಕಲ್ಪನೆಯಲ್ಲಿ 6,7 ತಿಂಗಳ ಕಾಲ ಚರ್ಚೆ ಮಾಡಿ ಡಿಪಿಆರ್ ತಯಾರಿಸಲಾಗಿದೆ. ಈ ಯೋಜನೆಗೆ ಸರಕಾರದ ಅನುಮೋದನೆ ಸಿಗಬೇಕಿದ್ದು, ಈ ಯೋಜನೆ ಯಶಸ್ವಿಯಾದಲ್ಲಿ ಉಡುಪಿ ನಗರ ಇಡೀ ದೇಶದಲ್ಲೇ ಮಾದರಿ ನಗರವಾಗಲಿದೆ ಎಂದರು.

ಹೈವೆಯಿಂದ ಮಲ್ಪೆಗೆ ಸಾಗುವ ರಸ್ತೆಯನ್ನು ಸರ್ವೆ ಮಾಡಬೇಕಾಗಿದ್ದು, ಇದು ಆದರೆ ನಮ್ಮ ಯೋಜನೆ ಈಡೇರಬಹುದು. ಕರಾವಳಿ ಸರ್ಕಲ್ ನಿಂದ ಮಲ್ಪೆಗೆ ರಸ್ತೆ ಅಭಿವೃದ್ಧಿ ಮಾಡಬೇಕು ಎನ್ನುವ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಗೆ ಸರಕಾರದಿಂದ ಅನುಮೋದನೆ ಸಿಕ್ಕಿದೆ. ಈ ಯೋಜನೆಯ ಸಾಕಾರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಬೇಕಿದ್ದು, ಈ ಪ್ರಕ್ರಿಯೆ ನಮ್ಮ ಜಿಲ್ಲಾಡಳಿತಕ್ಕೆ ಆಗಬೇಕು ಎಂದು ಕೇಳಲಾಗಿದೆ ಎಂದರು.

ಇನ್ನು ತಾವು ನಡೆದು ಬಂದ ಹಾದಿಯನ್ನು ನೆನೆದುಕೊಂಡು ತಮ್ಮ ಅನುಭವ, ಕನಸುಗಳನ್ನು ಹಂಚಿಕೊಂಡ ಅವರು, ಮೂರು ಹೊತ್ತಿನ ಹೊಟ್ಟೆಪಾಡಿಗಾಗಿ ಕಷ್ಟ ಪಟ್ಟ ದಿನಗಳು ನೆನಪಿದೆ. ಹೊಟ್ಟ ಪಾಡಿಗಾಗಿ ಒಂದು ಕೆಲಸ ಬೇಕು ಎನ್ನುವ ಕಾರಣದಿಂದ ಶಿಕ್ಷಣವನ್ನು ಮಾಡಿದ್ದೆ, ಟಿಸಿಎಚ್ ಮಾಡಿ ಶಿಕ್ಷಕನಾಗಿ ಜೀವನಕ್ಕೆ ಒಂದು ಕೆಲಸ ಸಿಕ್ಕಿದರೆ ಸಾಕು ಮನೆ ನಿರ್ವಹಣೆ ಸಾಧ್ಯ ಅಂತ ಅಂದುಕೊಂಡಿದ್ದೆ. ಆದರೆ ಟಿಸಿಎಚ್ ನಲ್ಲಿ ಅವಕಾಶ ಸಿಗದಾಗ,  ಬಿಎಡ್ ಮಾಡಿ ಹೈಸ್ಕೂಲ್ ಶಿಕ್ಷಕನಾಗಿ ಅಪ್ಪ ಅಮ್ಮನ್ನ ಸಾಕಬೇಕು ಅಂದುಕೊಂಡೆ. ಬಿಎಡ್ ಮಾಡಿದರೂ ಅದೂ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಕೆಎಎಸ್ ಗೆ ಅರ್ಜಿ ಕರೆಯಲಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು ಪರೀಕ್ಷೆ ಬರೆದು ರಾಜ್ಯದಲ್ಲೇ 14 ನೇ ರ್ಯಾಂಕ್ ಪಡೆದು ಉತ್ತೀರ್ಣನಾದೆ. ಅಲ್ಲೆದೆ ಆಗಲೇ ಒಮ್ಮೆ ಕೆಲಸಕ್ಕೆ ಸೇರಿದ ಮೇಲೆ ಯಾವುದೇ ವ್ಯಕ್ತಿಗಳ ಪ್ರಭಾವವಿಲ್ಲದೆ ಪೋಸ್ಟಿಂಗ್‍ಗಳನ್ನು ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆ. ಈವರೆಗೆ ಅದನ್ನು ಕಾಯ್ದುಕೊಂಡು ಬಂದಿದ್ದೇನೆ ಮುಂದಿನ 14 ವರ್ಷಗಳ ಸೇವೆಯಲ್ಲಿಯೂ ಅದೇ ರೀತಿ ಮುಂದುವರೆಯಲು ಬಯಸುತ್ತೇನೆ ಎಂದರು.

ಇನ್ನು ತಮ್ಮ ಭವಿಷ್ಯದ ಕನಸಿನ ಬಗ್ಗೆ ಮಾತನಾಡಿದ ಅವರು, ಸಾಧ್ಯವಾದರೆ ಶಿಕ್ಷಣ ಇಲಾಖೆ ಆಯುಕ್ತನಾಗಬೇಕೆನ್ನುವ ಆಸೆ ಇದೆ. ಈ ಮೂಲಕ ಶೀಕ್ಷಣ ವನ್ನು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸುವಂತೆ ಮಾಡಬೇಕು, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಮುಚ್ಚುವ ಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳ ಪ್ರತಿಷ್ಟೆಯನ್ನು ಮತ್ತೆ ಮರಳಿ ತರುವಂತಹ ಕೆಲಸ ಆಗಬೇಕು ಎನ್ನುವ ಆಸೆ ಇದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ ವಹಿಸಿದ್ದರು. ಉಡುಪಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಎನ್ಪ್ರೆಸ್‌ಕ್ಲಬ್ ಸಂಚಾಲಕ ಸುಭಾಷ್ಚಂದ್ರ ವಾಗ್ಳೆ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!