ಇಂತಹ 10 ಸಿಡಿ ಬಿಡಲಿ, ಯಾವ ಕೇಸ್ ಬೇಕಾದರೂ ಹಾಕಲಿ: ಸಿಡಿ ಲೇಡಿಗೆ ಜಾರಕಿಹೊಳಿ ಸವಾಲು
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂದಿಸಿದಂತೆ ತಮ್ಮ ವಿರುದ್ಧ ಯುವತಿ ದೂರು ನೀಡುವುದಾಗಿ ಹೇಳಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆಕೆ ಯಾವ ಕೇಸ್ ಬೇಕಾದರೂ ಹಾಕಲಿ, ಎದುರಿಸಲು ನಾನು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ
ಸದ್ಯ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಸಂತ್ರಸ್ತ ಯುವತಿ ರಮೇಶ್ ಜಾರಕಿ ಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಮಹಾ ಷಡ್ಯಂತ್ರ ಎಂದು ಮೊದಲಿಂದಲೂ ಹೇಳುತ್ತಿದ್ದೇನೆ. ಆಕೆ ನಿಜವಾದ ಸಂತ್ರಸ್ತೆಯಾಗಿದ್ದರೆ ಮೊದಲೇ ದೂರು ಕೊಡಬೇಕಿತ್ತು. ಈಗ ಎಲ್ಲೋ ಕುಳಿತು ದೂರು ಕೊಡುತ್ತಿದ್ದಾಳೆ. ಇಂತಹ 10 ಸಿಡಿ ಬಿಡಲಿ. ಯಾವ ಕೇಸ್ ಬೇಕಾದರೂ ಹಾಕಲಿ. ಎಲ್ಲದಕ್ಕೂ ನಾನು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ನಾನು ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವುದಿಲ್ಲ ಎಂದ ಅವರು, ನಾನೇನು ತಪ್ಪು ಮಾಡಿಲ್ಲ. ಹಾಗಿದ್ದ ಮೇಲೆ ನಾನೇಕೆ ಜಾಮೀನು ತೆಗೆದುಕೊಳ್ಳಬೇಕೆಂದು ಮರು ಪ್ರಶ್ನಿಸಿದ್ದಾರೆ. ಇದೇ ವೇಳೆ ನಾನು ವಕೀಲರ ಜತೆ ಮಾತನಾಡುತ್ತೇನೆ. ಆ ಬಳಿಕ ಹೆಚ್ಚಿನ ವಿವರ ನೀಡುತ್ತೇನೆ. ಸಿಡಿ ಸೇರಿದಂತೆ ಇನ್ನೂ ಏನೇನು ಬಿಡುತ್ತಾರೋ ಬಿಡಲಿ. ನಾನು ರೆಡಿ ಇದ್ದೇನೆ ಎಂದು ಹೇಳಿದ್ದಾರೆ.