ಮೋದಿ ಆಡಳಿದಲ್ಲಿ 155 ಲಕ್ಷ ಕೋಟಿ ಸಾಲ ಹೆಚ್ಚಳ- ಶ್ವೇತಪತ್ರಕ್ಕೆ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ ಜೂ.11: ಪ್ರಧಾನಿ ನರೇಂದ್ರ ಮೋದಿಯವರ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ದೇಶದಲ್ಲಿ ಸಾಲದ ಪ್ರಮಾಣ 155 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಮೋದಿ ಸರ್ಕಾರದ ಆರ್ಥಿಕ ದುರಾಡಳಿತ ಆರ್ಥಿಕತೆಯ ಇಂದಿನ ಸ್ಥಿತಿಗೆ ಕಾರಣ ಎಂದಿರುವ ಕಾಂಗ್ರೆಸ್ ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಮಂಡಿಸುವಂತೆ ಆಗ್ರಹಿಸಿದೆ. ಹಾಗೂ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನಾಥ್ ಅವರು, 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಲದ ಹೊರೆ 100 ಲಕ್ಷ ಕೋಟಿ ರೂಪಾಯಿ ಹೆಚ್ಚಿದೆ ಎಂದು ಆರೋಪಿಸಿದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ನಿರ್ವಹಣೆ, ಮಾಧ್ಯಮಗಳ ಶೀರ್ಷಿಕೆಯನ್ನು ನಿರ್ವಹಿಸಿದಂತಲ್ಲ”. ಇದನ್ನು ಟೆಲಿಪ್ರಾಂಪ್ಟ್‍ಗಳ ಮೂಲಕ ಸಾಧಿಸಲಾಗದು. ಅಂತೆಯೇ ನಿಶ್ಚಿತವಾಗಿಯೂ ವಾಟ್ಸಪ್ ಫಾರ್ವರ್ಡ್‍ಗಳ ಮೂಲಕ ಮಾಡಲಾಗದು ಎಂದು ವ್ಯಂಗ್ಯವಾಡಿದರು. ಆರ್ಥಿಕತೆಯ ಲೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

“ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ರಾಜಕೀಯ ವಲಯದ ಮತ್ತೊಂದು ಭಾಗವನ್ನು ಅದಕ್ಷ, ಅಸಮರ್ಥ ಹಾಗೂ ಭ್ರಷ್ಟ ಎಂದು ಬಣ್ಣಿಸುತ್ತಿದ್ದರು. ಇದೀಗ ಈ ವಿಶೇಷಣೆಗಳು ಎಲ್ಲರಿಗಿಂತ ಹೆಚ್ಚಾಗಿ ಅವರಿಗೇ ಸೂಕ್ತವಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.

“ಭಾರತದ ಆರ್ಥಿಕ ಪ್ರಗತಿಯ ಕಥಾನಕವನ್ನು ಹಾಳು ಮಾಡಿದ್ದಲ್ಲದೇ ವ್ಯಾಪಕ ನಿರುದ್ಯೋಗ, ಏರುತ್ತಿರುವ ಹಣದುಬ್ಬರದ ಮೂಲಕ ಮೋದಿ ಯಾರ ಕಲ್ಪನೆಗೂ ನಿಲುಕದ್ದನ್ನು ಮಾಡಿದ್ದಾರೆ. ಅಂದರೆ ಭಾರತದ ಸಾಲದ ಹೊರೆಯನ್ನು 100 ಲಕ್ಷ ಕೋಟಿ ರೂಪಾಯಯಷ್ಟು ಹೆಚ್ಚಿಸಿದ್ದು, ಇದು ಅಪಾಯಕಾರಿ ಮಟ್ಟ ತಲುಪಿದೆ” ಎಂದರು.

2014ರಲ್ಲಿ ದೇಶದ ಸಾಲದ ಹೊರೆ 55 ಲಕ್ಷ ಕೋಟಿ ರೂಪಾಯಿ ಇದ್ದುದು, ಇದೀಗ 155 ಲಕ್ಷ ಕೋಟಿಗೆ ಹೆಚ್ಚಿದೆ. ಹಿಂದಿನ 67 ವರ್ಷಗಳ ಅವಧಿಯಲ್ಲಿ 14 ಪ್ರಧಾನಿಗಳು ಆಡಳಿತದಲ್ಲಿದ್ದಾಗ ಒಟ್ಟು 55 ಲಕ್ಷ ಕೋಟಿ ಸಾಲ ಆಗಿತ್ತು. ಆದರೆ ಮೋದಿಯೊಬ್ಬರ ಆಡಳಿತಾವಧಿಯಲ್ಲೇ ಇದು 100 ಲಕ್ಷ ಕೋಟಿಯಷ್ಟು ಹೆಚ್ಚಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!