ಕಾಂಗ್ರೆಸ್ಸಿನ ಬೆದರಿಕೆಗಳಿಗೆ ಬಿಜೆಪಿ ಬೆದರುವುದಿಲ್ಲ- ಕುಯಿಲಾಡಿ

ಉಡುಪಿ ಜೂ.5(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಬಿಜೆಪಿ ವತಿಯಿಂದ ದಿಡೀರನೆ ವಿದ್ಯುತ್ ಶುಲ್ಕವನ್ನು ಏರಿಸಿದ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಇಂದು ಸಂಜೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು, ಐದು ಗ್ಯಾರಂಟಿ ಗಳನ್ನು ತೋರಿಸಿ, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಪ್ರಥಮ ಕ್ಯಾಬಿನೆಟ್ ನಲ್ಲಿ  ಎಲ್ಲಾ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿ ಈಗ ಎಲ್ಲವನ್ನೂ ಮರೆತು ಜನರಿಗೆ ಮಂಕು ಬೂದಿ ಎರೆಚುವ ಕೆಲಸ ಮಾಡುತ್ತಿದೆ. ಒಂದು ಬದಿಯಲ್ಲಿ ಎಲ್ಲರಿಗೂ ಉಚಿತ ವಿದ್ಯುತ್ ಎಂದು ಹೇಳಿದ್ದ ಕಾಂಗ್ರೆಸ್, ಇವತ್ತಿನಿಂದ ವಿದ್ಯುತ್ ಬಿಲ್ ಹೆಚ್ಚು ಮಾಡಿದೆ. 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿ ಈಗ ತನ್ನದೇ ಹೊಸ ಲೆಕ್ಕವನ್ನು ಜನರ ಮುಂದೆ ಇಟ್ಟು ಜನರ ಕಿವಿಗೆ ಹೂವು ಇಟ್ಟಿದೆ ಎಂದು ಹೇಳಿದರು.

ಕಾಂಗ್ರೆಸ್ ಬೇರೆ ಬೇರೆ ಹಂತದಲ್ಲಿ ಮೋಸ ಮಾಡಲು ಹೊರಟಿದೆ ಎಂದ ಅವರು, ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು , ಯುವ ನಿಧಿ ಕೊಡುವುದಾಗಿ ತಿಳಿಸಿತ್ತು. ಆದರೆ ಇವತ್ತು ಸಿದ್ದರಾಮಯ್ಯ ನವರು ಈ ವರ್ಷದ ವಿದ್ಯಾರ್ಥಿಗಳಿಗೆ 6 ತಿಂಗಳು ಕೆಲಸ ಸಿಗದಿದ್ದರೆ ಮಾತ್ರ ಎಂದು ಹೇಳುತ್ತಿದ್ದಾರೆ. ಜೊತೆಗೆ ಎಲ್ಲಾ ಬಸ್ ನಲ್ಲಿ ಫ್ರೀ ಎಂದು ಹೇಳಿದ್ದ ಕಾಂಗ್ರೆಸ್ ಈಗ ಕೆಂಪು ಬಸ್ ನಲ್ಲಿ ಮಾತ್ರ ಹೋಗಿ ಬೇರೆ ಬಸ್ ನಲ್ಲಿ ಫ್ರೀ ಇಲ್ಲ ಅಂತಿದ್ದಾರೆ. ಹೀಗೆ ಎಲ್ಲದರಲ್ಲೂ ಸುಳ್ಳು ಹೇಳಿ ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 15 ದಿನಗಳೊಳಗೆ ತನ್ನ ಬಣ್ಣವನ್ನು ತೋರಿಸಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿಯ ಕಾರ್ಯಕರ್ತರು ಬಾಲ ಬಿಚ್ಚಿದರೆ ಜೈಲಿಗಟ್ಟುತ್ತೇವೆ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಹಿಟ್ಲರ್ ಸಂಸ್ಕೃತಿಯನ್ನು ತೋರಿಸುತ್ತಿದೆ. ಆದರೆ  ಬಿಜೆಪಿ ಯಾವುದೇ ಜನ ವಿರೋಧಿ ನೀತಿಗಳಿದ್ದರೆ ಖಂಡಿತವಾಗಿಯೂ ಮಾತನಾಡುತ್ತದೆ. ಕಾಂಗ್ರೆಸ್ ‌ನ ಧಕ್ಮಿಗೆ , ಬೆದರಿಕೆಗೆ ಬಿಜೆಪಿಯ ಕಾರ್ಯಕರ್ತರು ಹೆದರುವುದಿಲ್ಲ. ಕರ್ನಾಟಕದಲ್ಲಿ ಜನ ಇವತ್ತು ಚುನಾವಣೆಯಲ್ಲಿ ಫಲಿತಾಂಶ ನಿಮ್ಮ ಪರವಾಗಿ ಕೊಟ್ಟಿದ್ದಾರೆ. ಇದರ ಅರ್ಥ ಹಿಂದೂ ಕಾರ್ಯಕರ್ತರನ್ನು ಬೆದರಿಸುವುದಲ್ಲ. ನೀವು ಜನಪರ ಆಡಳಿತ ನೀಡಿ, ನೀವು ಹೇಳಿರುವ ಐದು ಗ್ಯಾರಂಟಿ ಗಳನ್ನು ನೀಡಿ ಎಂದರು.

ಗೋ ಹತ್ಯೆ ನಿಷೇಧವನ್ನು  ಹಿಂತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಪಶುಸಂಗೋಪನಾ ಸಚಿವರು ಕೋಣ ಬೇರೆ ಅಲ್ಲ, ದನ ಬೇರೆ ಅಲ್ಲ ಎಮ್ಮೆ ಬೇರೆ ಅಲ್ಲ ಎಂದು ಹೇಳುತ್ತಾರೆ. ಇಂತವರನ್ನು ಸಚಿವ ಮಾಡಿದ ಸಿದ್ದರಾಮಯ್ಯ ಅವರ ತಂಡಕ್ಕೆ ನಾಚಿಕೆ ಆಗಬೇಕು. ದನದ ಮಹತ್ವವೇನು, ಕೋಣದ ಮಹತ್ವವೇನು, ಎಂದು ಗೊತ್ತಿರದ ಒಬ್ಬರಿಗೆ ಸಚಿವ ಸ್ಥಾನ ನೀಡಿದ್ದೀರಿ. ಬಹುಶಃ ಇದಕ್ಕಿಂತ ದುರದೃಷ್ಟ ಮತ್ತೊಂದಿಲ್ಲ ಎಂದರು.

ಇಂದು ಕರ್ನಾಟಕದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ವ್ಯವಸ್ಥೆ ಕಾಂಗ್ರೆಸ್‌ನ ಮಂತ್ರಿಗಳ ಹೇಳಿಕೆಯಿಂದ ಆಗ್ತಾ ಇದೆ. ಇದಕ್ಕೆ ಯಾವುದಕ್ಕೂ ಬಿಜೆಪಿ ಕಾರ್ಯಕರ್ತರು ಜಗ್ಗೋದಿಲ್ಲ. ಬಗ್ಗೋದಿಲ್ಲ. ಎಲ್ಲೆಲ್ಲಿ ಪ್ರತಿಭಟನೆ ಮಾಡಬೇಕೋ ಅಲ್ಲಲ್ಲಿ ಪ್ರತಿಭಟನೆ ಮಾಡಿಯೇ ಮಾಡುತ್ತೇವೆ. ನೀವು ಜನಪರ ಆಡಳಿತ ನೀಡಿ. ಬಿಜೆಪಿ ಕಾರ್ಯ ಕರ್ತರನ್ನು ಬೆದರಿಸಿ , ಹೆದರಿಸಿ ಆಡಳಿತ ಮಾಡ್ತೇವೆ ಎಂದರೆ ನಿಮ್ಮಷ್ಟು ಬಂಡರು ಬೇರೆ ಯಾರಿಲ್ಲ ಎಂದು ಟೀಕಿಸಿದರು. 

ಗೃಹ ಲಕ್ಷ್ಮೀ ಯೋಜನೆ ಯನ್ನು ಅತ್ತೆಗೆ ಕೊಡಬೇಕೋ ಸೊಸೆ ಗೆ ಕೊಡಬೇಕೋ ಎಂದು ಚುನಾವಣೆ ಮೊದಲು ಗೊತ್ತಿರಲಿಲ್ಲವಾ ಈಗ ಯಾಕೆ ಮನೆ ಒಡೆಯುವ ಕೆಲಸ ಮಾಡುತ್ತಿದ್ದೀರಾ ಹಿಜಾಬ್ ಬಗ್ಗೆ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಅಂತೀರಿ ಹಾಗಾದರೆ ನಿಮಗೆ ಓಟು ನೀಡಿದ್ದು ಕೇವಲ ಮುಸ್ಲಿಮರ, ಅಲ್ಪ ಸಂಖ್ಯಾತರ ಎಂದು ಚರ್ಚೆ ಮಾಡ ಬೇಕಿದೆ ಎಂದು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಅನಿತಾ ಶ್ರೀಧರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿಗಳಾದ ಆಲ್ವಿನ್ ಡಿಸೋಜ, ಆಸಿಫ್ ಕಟಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಬಾಣ, ಜಿಲ್ಲಾ ಮೋರ್ಚಾಗಳ ಸಂಯೋಜಕರಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ವಿಜಯ ಕುಮಾರ್ ಉದ್ಯಾವರ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ಪೂಜಾರಿ, ಗಣೇಶ್ ಕುಲಾಲ್, ಪ್ರಮುಖರಾದ ರಾಜೇಂದ್ರ ಪಂದುಬೆಟ್ಟು, ಅಕ್ಷಯ್ ಶೆಟ್ಟಿ, ಸದಾನಂದ ಪ್ರಭು, ದಿನಕರ ಪೂಜಾರಿ, ಆನಂದ ಸುವರ್ಣ, ರುಡಾಲ್ಫ್, ಮಾಯಾ ಕಾಮತ್, ಪೂರ್ಣಿಮಾ ರತ್ನಾಕರ್, ಅಶ್ವಿನಿ ಶೆಟ್ಟಿ ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!