ಒಡಿಶಾ: ರೈಲು ದುರಂತಕ್ಕೆ ಕೋಮು ಆಯಾಮ ನೀಡುವವರ ವಿರುದ್ಧ ಕ್ರಮ: ಪೊಲೀಸ್ ಎಚ್ಚರಿಕೆ

ಹೊಸದಿಲ್ಲಿ ಜೂ.4 : ಒಡಿಶಾದಲ್ಲಿ ನಡೆದ ರೈಲು ಅಪಘಾತದ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದ ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಹರಡುವುದನ್ನು ತಪ್ಪಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ರೈಲು ದುರಂತ ನಡೆದ ಸ್ಥಳದಲ್ಲಿ ಮಸೀದಿ ಇದೆ ಎಂಬಂತೆ ತಿರುಚಿದ ಚಿತ್ರಗಳನ್ನು ಬಲಪಂಥೀಯರು ಹರಡುತ್ತಿದ್ದು, ಅಪಘಾತ ಶುಕ್ರವಾರ ನಡೆದಿರುವುದನ್ನು ಉಲ್ಲೇಖಿಸಿ ರೈಲು ಅಪಘಾತದ ಹಿಂದೆ ನಿರ್ದಿಷ್ಟ ಸಮುದಾಯದ ಕೈವಾಡ ಇದೆ ಎಂಬರ್ಥದಲ್ಲಿ ಹಲವರು ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ಪೊಲೀಸರು,ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಹರಡುವುದನ್ನು ತಡೆಯಲು ಜನರನ್ನು ಒತ್ತಾಯಿಸಿದ್ದಾರೆ. ಹಾಗೂ ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅಪಘಾತದ ಪ್ರಕರಣಕ್ಕೆ ‘ಕೋಮು ಆಯಾಮ’ನ ನೀಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

“ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತಕ್ಕೆ ಕುಚೇಷ್ಟೆಯಿಂದ ಕೋಮು ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲ ಅಂಶಗಳ ಕುರಿತು ಒಡಿಶಾದ ಜಿಆರ್‌ಪಿ ತನಿಖೆ ನಡೆಯುತ್ತಿದೆ” ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

“ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು” ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!