ಕಾಂಗ್ರೆಸ್ನ ಗ್ಯಾರಂಟಿ ಯೋಜನೆಯಲ್ಲಿ ಬಿಜೆಪಿ ರಾಜಕೀಯ-ಕೃಷ್ಣಮೂರ್ತಿ ಆಚಾರ್ಯ
ಉಡುಪಿ ಜೂ.1(ಉಡುಪಿ ಟೈಮ್ಸ್ ವರದಿ): ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜಕೀಯ ಮಾಡುತ್ತಿರುವ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವತು, ಕುಯಿಲಾಡಿ ಸುರೇಶ್ ನಾಯಕ್ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ, ಅದೇ ರೀತಿ ಉಡುಪಿಯ ಬಿಜೆಪಿ ಜಿಲ್ಲಾಧ್ಯಕ್ಷರೂ. ಆದರೂ ಕೊರೋನಾ ಸಮಯದಲ್ಲಿ ಬಸ್ನ ಟಿಕೆಟ್ ದರ ಏರಿಕೆಯನ್ನು ಮಾಡಿದ್ದರು. ಅವರದ್ದೇ ಸರಕಾರ ಇದ್ದರೂ ಬೆಲೆ ಏರಿಕೆ ಕಡಿಮೆ ಮಾಡಿಲ್ಲ. ಟೋಲ್ ಗೇಟ್ ನಲ್ಲೂ ಸುಂಕದ ದರ ಏರಿಕೆ ಕಡಿಮೆ ಮಾಡಿಲ್ಲ. ಈಗ ಕಾಂಗ್ರೆಸ್ ಜನಸಾಮಾನ್ಯರಿಗೆ ನೀಡಿರುವ ಗ್ಯಾರಂಟಿ ಯೋಜನೆಯಲ್ಲಿ ಏಕಾಏಕಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯಾವಗಲೂ ಜನಸಾಮಾನ್ಯರ ಪರವಾಗಿ ಇರುವ ಪಕ್ಷ. ಯಾರೂ ಕಾಂಗ್ರೆಸ್ಗೆ ಪಾಠ ಹೇಳುವ ಅಗತ್ಯ ಇಲ್ಲ ಎಂದ ಅವರು, ಬಿಜೆಪಿ ಬಂಡವಾಳ ಶಾಹಿಗಳ ಪರವಾಗಿತ್ತೇ ವಿನಹ, ಅವರಿಗೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಕೊರೋನಾ ಮುಗಿದು ವರ್ಷಗಳಾಗಿದೆ. ಅವರಿಗೆ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಮಹಿಳೆಯರ ಬಗ್ಗೆ ಕಾಳಜಿ ಇದ್ದಿದ್ದರೆ ಬೆಲೆ ಏರಿಕೆಗಳನ್ನು ಕಡಿಮೆ ಮಾಡಬಹುದಿತ್ತು. ಟೋಲ್ ಸುಂಕದ ದರ ಇಳಿಸಬಹುದಿತ್ತು. ಅದ್ಯಾವುದೂ ಮಾಡಿಲ್ಲ. ಆದರೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಬಡವರಿಗೆ ಏನೋ ಉಪಕಾರ ಮಾಡುತ್ತಿರುವಾಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.