ಉಡುಪಿ: ಸಾರ್ವಜನಿಕರಿಗೆ ಕೊರೋನಾ ಜಾಗೃತಿ ಪಾಠ ಕಲಿಸಿದ ಜಿಲ್ಲಾಧಿಕಾರಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಸದ್ಯ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ 113 ಪ್ರಕರಣಗಳು ಪತ್ತೆಯಾಗಿದ್ದು 439 ಸಕ್ರಿಯ ಪ್ರಕರಣಗಳಿವೆ. ಆದ್ದರಿಂದ ಕೊರೋನಾ ಬಗೆಗೆ ಹೆಚ್ಚಿನ ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು (ಮಾ.23) ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ತಂಡ ಸಾರ್ವಜನಿಕರಲ್ಲಿ ಕೊರೋನಾ ಜಾಗೃತಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಗರದ ಪ್ರಮುಖ ಕೇಂದ್ರವಾದ ಉಡುಪಿ ಸಿಟಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಮಾಡುವಂತೆ ಪ್ರಯಾಣಿಕರು, ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳಲ್ಲಿ ಸಿಬ್ಬಂದಿಗಳು, ಗ್ರಾಹಕರು, ಬಸ್ ಚಾಲಕ ನಿರ್ವಾಕರಲ್ಲಿ ಜಾಗೃತಿ ಮೂಡಿಸಿದರು. ಇನ್ನು ಇದೇ ವೇಳೆ ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಿದರು.
ಈ ಗಾಗಲೇ ಜಿಲ್ಲೆಯಲ್ಲಿ ಈ ವರೆಗೆ 3,97,783 ಮಂದಿಯನ್ನು ಕೊರೋನಾ ಪರೀಕ್ಷೆ ಗೆ ಒಳಪಡಿಸಲಾಗಿದ್ದು, ಈ ಪೈಕಿ 24328 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿದೆ. ಜಿಲ್ಲೆಯ ಲ್ಲಿ ಈ ವರೆಗೆ ಕೋವಿಡ್ ನಿಂದ 23699 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಡಿಶ್ಚಾರ್ಜ್ ಆಗಿದ್ದು, 190 ಮಂದಿಯನ್ನು ಕೊರೋನಾ ಸೋಂಕು ಬಲಿ ಪಡೆದುಕೊಂಡಿದೆ.
ಸದ್ಯ ಜಿಲೆಯಲ್ಲಿ ಏರುತ್ತಿರುವ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಫೀಲ್ಡ್ ಗೆ ಇಳಿದಿದ್ದು ನಗರದ ಜನತೆಯಲ್ಲಿ ಕೋವಿಡ್ ಕುರಿತ ಜಾಗೃತಿ ಮೂಡಿಸುವ ಕಾರ್ಯಕೈಗೊಂಡಿದ್ದಾರೆ.