ಕಾಪು: ಮಾ.23 ಮತ್ತು 24 ರಂದು ಮದ್ಯ ಮಾರಾಟ ನಿಷೇಧ ಹಿಂಪಡೆಯಲಾಗಿದೆ – ಜಿಲ್ಲಾಧಿಕಾರಿ

ಉಡುಪಿ: ಕಾಪುವಿನ ಮೂರು ಮಾರಿಗುಡಿಯಲ್ಲಿ ಮಾ.23 ಮತ್ತು 24 ರಂದು ಸುಗ್ಗಿ ಮಾರಿ ಪೂಜೆ ನಡೆಯಲಿರುವ ಹಿನ್ನಲೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿರವುದನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಕಾಪು ತಾಲೂಕಿನ ಕಾಪುವಿನ ಮಾರಿ ಗುಡಿಗಳಲ್ಲಿ ಸುಗ್ಗಿ ಮಾರಿ ಪೂಜೆ ನಡೆಯುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಮತ್ತು ರೆಸ್ಟೋರೆಂಟ್ ಮತ್ತು ವೈನ್ ಶಾಪ್‍ಗಳ ಮದ್ಯ ಮಾರಾಟವನ್ನು ಮಾ.23 ರ ಸಂಜೆ 6 ಗಂಟೆಯಿಂದ ಮಾ.24ರ ರಾತ್ರಿ 12 ಗಂಟೆ ವರೆಗೆ ಈ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಒಣ ದಿನವನ್ನು ಘೋಷಿಸಲಾಗಿತ್ತು.

ಈ ನಡುವೆ ಮದ್ಯ ಮಾರಾಟ ಅಂಗಡಿಗಳ ಮಾಲಿಕರು ಠಾಣೆಗೆ ಹಾಜರಾಗಿ ಈತನಕ ಸುಗ್ಗಿ ಮಾರಿ ಪೂಜೆ ದಿನದಂದು (ಎರಡು ದಿನ) ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರಕರಣಗಳು ದಾಖಲಾಗಿರುವುದಿಲ್ಲ ಅಲ್ಲದೇ ಸುಗ್ಗಿ ಮಾರಿ ಪೂಜೆ ದಿನದಂದು ಈ ತನಕ ಮದ್ಯ ಮಾರಾಟ ನಿಷೇಧವಾಗಿರುವುದಿಲ್ಲ, ಅಲ್ಲದೇ ಕಳೆದೊಂದು ವರ್ಷದಿಂದ ಕೊರೋನಾ ಮಹಾಮಾರಿಯಿಂದ ಸನ್ನದುದಾರರಿಗೆ ಆರ್ಥಿಕವಾಗಿ ತುಂಬಲಾರದ ನಷ್ಟ ಉಂಟಾಗಿರುವುದರಿಂದ ಮಾ. 23 ಮತ್ತು 24 ರಂದು ಯಥಾಸ್ಥಿತಿಯಲ್ಲಿ ಮದ್ಯ ಮಾರಾಟ ಮಾಡಲು ಅನುವುಮಾಡಿ ಕೊಡಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗಿ ಸುಗ್ಗಿ ಮಾರಿ ಪೂಜೆ ದಿನದಂದು ಯಾವುದೇ ಕಾನೂನು ವ್ಯವಸ್ಥೆಗೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಘಟನೆಗಳು ದಾಖಲಾಗದೇ ಇರುವುದರಿಂದ ಮದ್ಯ ಮಾರಾಟ ಅಂಗಡಿಗಳ ಮಾಲಿಕರು ಡ್ರೈ ಡೇ ಅದೇಶದಲ್ಲಿ ಸಡಿಲಿಕೆ ಮಾಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಮಾ.23 ರ ಸಂಜೆ 6 ಗಂಟೆಯಿಂದ ಮಾ.24ರ ರಾತ್ರಿ 12 ಗಂಟೆ ವರೆಗೆ ಕಾಪು ಪೊಲೀಸ್ ಠಾಣಾ ಸರಹದ್ದಿನ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!