ಗೋವುಗಳ ಹೆಸರಿನಲ್ಲಿ ಮತಗಳನ್ನು ಕೇಳುವ ಬಿಜೆಪಿ ಎಂದೂ ಅವುಗಳ ಸೇವೆ ಮಾಡಿಲ್ಲ: ಛತ್ತೀಸ್ಗಡ ಸಿಎಂ
ದುರ್ಗ ಮೇ 22 : ಗೋವುಗಳ ಹೆಸರಿನಲ್ಲಿ ಮತಗಳನ್ನು ಕೇಳುತ್ತೀರಿ ಆದರೆ ಎಂದಿಗೂ ಅವುಗಳ ಸೇವೆಯನ್ನು ಮಾಡಿಲ್ಲ ಎಂದು ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ ಬಾಘೆಲ್ ಅವರು ಬಿಜೆಪಿಯ ವಿರುದ್ಧ ಆರೋಪ ಮಾಡಿದ್ದಾರೆ.
ದುರ್ಗ ಜಿಲ್ಲೆಯ ಪಟನ್ನಲ್ಲಿ ಆಯೋಜಿಸಲಾಗಿದ್ದ ‘ಭರವಸೆಗಳ ಸಮ್ಮೇಳನ’ದಲ್ಲಿ ಮಾತನಾಡುತ್ತಾ ರಾಜ್ಯದಲ್ಲಿಯ ಗೋಶಾಲೆಗಳಲ್ಲಿ ಗೋವುಗಳ ಅನುಪಸ್ಥಿತಿಯ ಕುರಿತು ಬಿಜೆಪಿಯ ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಗೋಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಅಲ್ಲಿ ಜಾನುವಾರುಗಳಿಲ್ಲ ಎಂದು ಹೇಳುತ್ತಿದ್ದಾರೆ. ಬೇಸಿಗೆಯಲ್ಲಿ ಮಧ್ಯಾಹ್ನ ಜಾನುವಾರುಗಳನ್ನು ಮೇಯಲು ಹೊರಗೆ ಬಿಡಲಾಗುತ್ತದೆ ಮತ್ತು ಅವು ಸಂಜೆಯ ವೇಳೆಗಷ್ಟೇ ಮರಳುತ್ತವೆ ಎನ್ನುವುದು ಛತ್ತೀಸ್ಗಡದ ಜನರಿಗೆ ಗೊತ್ತಿದೆ ಎಂದ ಅವರು,‘ನೀವು (ಬಿಜೆಪಿ) ಗೋವುಗಳ ಹೆಸರಿನಲ್ಲಿ ಮತಗಳನ್ನು ಕೇಳುತ್ತೀರಿ,ಆದರೆ ಎಂದಿಗೂ ಅವುಗಳ ಸೇವೆಯನ್ನು ಮಾಡಿಲ್ಲ. ಜಾನುವಾರುಗಳು ಯಾವಾಗ ಮೇಯುವ ಸ್ಥಳದಲ್ಲಿರುತ್ತವೆ ಮತ್ತು ಯಾವಾಗ ಗೋಶಾಲೆಗಳಲ್ಲಿ ಇರುತ್ತವೆ ಎನ್ನುವುದು ನಮಗೆ ಗೊತ್ತಿದೆ ’ ಎಂದರು.