2,000ರೂ ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ, ಗುರುತಿನ ಚೀಟಿ ಕೊಡಬೇಕಿಲ್ಲ: ಎಸ್‌ಬಿಐ

ನವದೆಹಲಿ: 2,000 ರೂ ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ ಪತ್ರ ಅಥವಾ ಗುರುತಿನ ಚೀಟಿ ಕೊಡಬೇಕಿಲ್ಲ ಎಂದು ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಪಷ್ಟನೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಕುರಿತು ಘೋಷಣೆ ಹೊರಡಿಸಿದ ಬೆನ್ನಲ್ಲೇ ಈ ಹಿಂದಿನ ನೋಟ್ ಬ್ಯಾನ್ ರೀತಿಯಲ್ಲಿ 2000ರೂ ಮುಖಬೆಲೆಯ ನೋಟುಗಳ ಬದಲಾವಣೆಗೆ ಬ್ಯಾಂಕ್ ಗಳ ಸುತ್ತ ಬೇಕಾಗುತ್ತದೆ. ಗುರುತಿನ ಚೀಟಿ ಹಿಡಿದು ಅಲೆಯಬೇಕಾಗುತ್ತದೆ ಎಂಬ ಪ್ರಶ್ನೆಗಳಿಗೆ ಎಸ್ ಬಿಐ ಭಾನುವಾರ ಸ್ಪಷ್ಟನೆ ನೀಡಿದೆ.

ಯಾವುದೇ ಮನವಿ ಚೀಟಿ ಇಲ್ಲದೇ ಗ್ರಾಹಕರು ಏಕಕಾಲಕ್ಕೆ 20,000 ರೂಗಳ ವರೆಗೆ 2,000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ವಿನಿಮಯದ ಸಮಯದಲ್ಲಿ ಗ್ರಾಹಕರು ಯಾವುದೇ ಗುರುತಿನ ಚೀಟಿಯನ್ನು ಒದಗಿಸುವ ಅಗತ್ಯವೂ ಇಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾನುವಾರ ಸ್ಪಷ್ಟಪಡಿಸಿದೆ.

ಗ್ರಾಹಕರು 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಠೇವಣಿ ಇರಿಸುವ ವೇಳೆ ಅರ್ಜಿ, ಮನವಿ ಸಲ್ಲಿಸಬೇಕೆ ಎಂಬ ಅನುಮಾನಗಳು ಜನರಲ್ಲಿ ಮೂಡಿವೆ. ಈ ಹಿನ್ನೆಲೆಯಲ್ಲಿ ಅನುಮಾನಗಳನ್ನು ಪರಿಹರಿಸಲು ಎಸ್‌ಬಿಐ ಈ ಸ್ಪಷ್ಟನೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಆದರೆ, 2,000 ಮುಖಬೆಲೆಯ ನೋಟುಗಳು ಕಾನೂನುಬದ್ಧ ಮಾನ್ಯತೆ ಹೊಂದಿರುವುದಾಗಿಯೂ ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿತ್ತು.

Leave a Reply

Your email address will not be published. Required fields are marked *

error: Content is protected !!