ಬೆಂಗಳೂರು:ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ತಾತ್ಕಾಲಿಕ ಮುಂದೂಡಿಕೆ

ಉಡುಪಿ (ಉಡುಪಿ ಟೈಮ್ಸ್): ಕರ್ನಾಟಕ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಮಾ.24 ರಿಂದ 31ರ ವರೆಗೆ ನಡೆಯಬೇಕಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿರುವ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮಾರ್ಗಸೂಚಿಗಳ ಪಾಲನೆಯ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ಮಾ.12 ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುತ್ತೋಲೆಯಲ್ಲಿ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವ ಬಗೆ ಹಲವು ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ, ಸಭೆ ಸಮಾರಂಭಗಳಲ್ಲಿ 500ಕ್ಕೂ ಹೆಚ್ಚುಮಂದಿ ಮೀರದಂತೆ ತೆರೆದ ಪ್ರದೇಶಗಳಲ್ಲಿ ಆಚರಿಸಬಹುದು ಎಂದು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಚಲನಚಿತ್ರೋತ್ಸವದಲ್ಲಿ ಸುಮಾರು ಏಳು ಸಾವಿರಕ್ಕಿಂತಲೂ ಹೆಚ್ಚು ಗಣ್ಯರು, ಅಥಿತಿಗಳು, ಚಿತ್ರಾಸಕ್ತರು. ಭಾಗವಹಿಸುವುದರಿಂದ ಈ ನಿಯಮಗಳ ಪಾಲನೆ ಮಾಡಲು ಕಷ್ಟಸಾಧ್ಯ ಹಾಗೂ ಚಲನಚಿತ್ರೋತ್ಸವದ ಕಲಾ ನಿರ್ದೇಶಕರು ಕೂಡಾ ಈ ನಿಯಮ ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಈ ಎಲ್ಲಾ ಅಂಶಗಳನ್ನು ಚರ್ಚಿಸುವ ಸಲುವಾಗಿ ಮಾ.15 ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ, ಸರ್ವ ಸದಸ್ಯರು, ಸರ್ವಾನುಮತದಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅನಿರ್ಧಿಷ್ಯ ಅವಧಿಗೆ ಮುಂದೂಡುವ ತೀರ್ಮಾಣ ಕೈಗೊಳ್ಳಲಾಯಿತು.


ಅಂತರಾಷ್ಟ್ರೀಯ ಚಲನಚಿತ್ರ ಸಮಾರಂಭ ಒಂದು ಅದ್ದೂರಿ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಅತಿಥಿಗಳು ಬರುತ್ತಾರೆ. ಅಲ್ಲದೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಾಸಕ್ತರು ಸೇರುವ ಕಾರಣ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ 19 ಜಾಗತಿಕ ಪರಿಣಾಮವನ್ನು ಮತ್ತು ಎರಡನೇ ಅಲೆಯನ್ನು ಕುರಿತು, ಅವಲೋಕನ ಪ್ರತಿದಿನವೂ ನಡೆಯುತ್ತಿದ್ದು, ತಜ್ಞರ ಸಲಹೆ ಪಡೆದುಕೊಂಡು ಮುಂದಿನ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!