ಕೈ ಅಧಿಕಾರಕ್ಕೆ ಬಂದರೆ ಗಲಭೆ: ಶಾ ಹೇಳಿಕೆ ನಿರ್ಲಜ್ಜತನದ, ಬೆದರಿಕೆ ತಂತ್ರ ಎಂದ ಜೈರಾಮ್ ರಮೇಶ್
ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗಲಭೆಗಳು ನಡೆಯಲಿವೆ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಅತ್ಯಂತ ನಿರ್ಲಜ್ಯತನದ ಹೇಳಿಕೆ ಮತ್ತು “ಬೆದರಿಕೆ” ಹಾಕಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ನಿನ್ನೆ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ ರಾಜ್ಯದ ಅಭಿವೃದ್ಧಿ “ರಿವರ್ಸ್ ಗೇರ್” ಸಾಗುತ್ತದೆ ಎಂದು ಹೇಳಿದ್ದರು. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಂಶಾಡಳಿತ ರಾಜಕೀಯವು ಸಾರ್ವಕಾಲಿಕ ಉತ್ತುಂಗಕ್ಕೆ ಏರಲಿದೆ ಮತ್ತು ಕರ್ನಾಟಕ ಗಲಭೆ ಪೀಡಿತ ರಾಜ್ಯವಾಗಲಿದೆ” ಎಂದು ಕೇಂದ್ರ ಗೃಹ ಸಚಿವರು ಆರೋಪಿಸಿದ್ದರು.
ಇಂದು ಅಮಿತ್ ಶಾಗೆ ತಿರುಗೇಟು ನೀಡಿದ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದು ಅತ್ಯಂತ ನಿರ್ಲಜ್ಜತನದ ಮತ್ತು ಬೆದರಿಸುವ ಹೇಳಿಕೆ ಎಂದಿದ್ದಾರೆ. ಭಾರತದ ಮೊಟ್ಟಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟ ಸಂಘಟನೆ(ಆರ್ ಎಸ್ಎಸ್)ಗೆ ನಿಷ್ಠರಾಗಿರುವ ಕೇಂದ್ರ ಗೃಹ ಸಚಿವರು ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ಸೋಲಿನ ಆತಂಕದಿಂದ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.