ಕಾರ್ಕಳ: ಎರಡು ಪ್ರತ್ಯೇಕ ಕಳ್ಳತನ ಪ್ರಕರಣ ದಾಖಲು, ಲಕ್ಷಾಂತರ ರೂಪಾಯಿ ಕಳವು
ಕಾರ್ಕಳ: ತಾಲೂಕಿನಲ್ಲಿ ಎರಡು ಪ್ರತ್ಯೇಕ ಕಳ್ಳತನದ ಪ್ರಕರಣ ದಾಖಲಾಗಿದೆ. ಒಂದು ಘಟನೆ ಕಾರ್ಕಳ ಅಜೆಕಾರುವಿನ ಮರ್ಣೆ ಗ್ರಾಮದ ಕೈಕಂಬ ಬಳಿ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ನಗ ನಗದು ದೋಚಿದ್ದಾರೆ.
ಇಲ್ಲಿನ ನಸೀಮಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ನಸೀಮಾ ಅವರು, ಮಾ.8 ರಂದು, ಗಂಡನೊಂದಿಗೆ ಕಾರ್ಕಳದಲ್ಲಿ ನಡೆಯುತ್ತಿದ್ದ ಗಂಡನ ಅಣ್ಣನ ಮಗಳ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಸಮಾರಂಭಕ್ಕೆ ಹೋಗುವ ಸಂದರ್ಭದಲ್ಲಿ ಮನೆಯ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಬೀಗ ಹಾಕಿ ಹೋಗಿದ್ದಾರೆ.
ಆದರೆ, ಮದುವೆ ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಮನೆಗೆ ಬಂದ ಕಳ್ಳರು ಮನೆಯ ಎದುರಿನ ಬಾಗಿಲು ಮುರಿದು ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಬೀಗ ಮುರಿಯಲು ಸಾಧ್ಯವಾಗದಾಗ ಮನೆಯ ಮುಂಭಾಗದಲ್ಲಿರುವ ಇನ್ನೊಂದು ಬಾಗಿಲ ಮೂಲಕ ಕಳ್ಳರು ಒಳ ಪ್ರವೇಶಿಸಿದ್ದಾರೆ. ಬಳಿಕ ಕೋಣೆಗೆ ನುಗ್ಗಿರುವ ಕಳ್ಳರು ಅಲ್ಲಿ ಕಬ್ಬಿಣದ ಕಪಾಟಿನಲ್ಲಿರಿಸಿದ್ದ 32,000 ರೂ. ಮೌಲ್ಯದ 1 ಪವನ್ ಚಿನ್ನದ ನೆಕ್ಲೆಸ್, 32,000 ರೂ ಮೌಲ್ಯದ 1 ಪವನ್ ಚಿನ್ನದ ಬ್ರಾಸ್ಲೆಟ್, 64,000 ರೂ. ಮೌಲ್ಯದ 2 ಪವನ್ ಚಿನ್ನದ ಬೆಂಡೋಲೆ ಜುಮ್ಕಿ, 2 ಲಕ್ಷ ರೂ. ನಗದು. ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಕಳ್ಳವು ಮಾಡಿರುವ ಸೊತ್ತುಗಳ ಒಟ್ಟು ಮೌಲ್ಯ 3,28,000 ರೂ ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಲ್ಲಿ ವಿವೇಕ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮಾ.9 ರಂದು ಮನೆಯ ಮುಖ್ಯದ್ವಾರದ ಬಾಗಿಲು ಮುರಿದು ಒಳ ನುಗ್ಗಿದ ಕದೀಮರು ಕೋಣೆಯಲ್ಲಿದ್ದ ಕಪಾಟಿನ ಬೀಗವನ್ನು ಮುರಿದು ಕಪಾಟಿನ ಒಳಗಡೆ ಇದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳವಾದ ಒಟ್ಟು ಆಭರಣಗಳ ಮೌಲ್ಯ 7,80,000 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ