ದ.ಕ ಮೂಲದ ವ್ಯಕ್ತಿ ದುಬೈನಲ್ಲಿ ನಿಗೂಢ ಸಾವು
ಬಂಟ್ವಾಳ: ದ.ಕ ಜಿಲ್ಲೆಯ ವ್ಯಕ್ತಿಯೊಬ್ಬರು ದುಬೈನಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆ ನಡೆದಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಬೊಲಾಂತೂರು ನಿವಾಸಿ ಸೂಫಿ ಮುಕ್ರಿಕರ್ ಅವರ ಪುತ್ರ ಮುತಾಲಿಬ್ ಮೃತಪಟ್ಟವರು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಹೊಂದಿದ್ದರು. ಕಳೆದ ಕೆಲವು ದಿನಗಳಿಂದ ಫೋನ್ ಸ್ವಿಚ್ ಆಫ್ ಆಗಿದ್ದು, ಇವರು ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ.
ಕುಟುಂಬದ ಯಾವುದೇ ಸದಸ್ಯರು ಅಥವಾ ಆಪ್ತರೊಂದಿಗೆ ಸಂಪರ್ಕಕ್ಕೆ ಬರದ ಕಾರಣ, ಅವರ ಕುಟುಂಬ ಸದಸ್ಯರು ಆತಂಕ್ಕೀಡಾಗಿದ್ದರು. ಈ ನಡುವೆ, ದುಬೈನ ಅಲ್-ರಾಫಾದಲ್ಲಿ ಮಾ.7 ರಂದು ಅವರ ಮೃತದೇಹ ಪತ್ತೆಯಾಗಿವೆ.
ದುಬೈನ ಪೊಲೀಸರು ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಭಾರತೀಯ ನಾಗರಿಕನ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು. ಅದರಂತೆ ಮೃತ ದೇಹವನ್ನು ಗುರುತಿಸುವಲ್ಲಿ ಕರ್ನಾಟಕ ಸಾಂಸ್ಕೃತಿಕ ವೇದಿಕೆ ನೆರವಾಗಿದ್ದು, ಮೃತರ ಸ್ಥಳೀಯ ವಿಳಾಸ ದಕ್ಷಿಣ ಕನ್ನಡ ಜಿಲ್ಲಾಡಳಿತದ ಮೂಲಕ ಪತ್ತೆಯಾಗಿದೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ದುಬೈ ಪೊಲೀಸರು ಶವವನ್ನು ಆಸ್ಪತ್ರೆಗೆ ಸಾಗಿಸಿದ್ದು, ಮೃತದೇಹವನ್ನು ದುಬೈನ ರಶೀದ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಮುತಾಲಿಬ್ ನರಷಾ ಅಂಕಣಕಾರರಾಗಿದ್ದು, ಈ ಹಿಂದೆ ಧಾರ್ಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಎಂಜಿನಿಯರಿಂಗ್ ಪದವಿ ಮುಗಿಸಿ, ದುಬೈಗೆ ಹೋಗಿದ್ದರು.