ಮಂಗಳೂರು: ಯಕ್ಷಗಾನ, ಕೋಲ, ಧಾರ್ಮಿಕ ಆಚರಣೆಗೆ ನಿರ್ಬಂಧವಿಲ್ಲ-ಡಿಸಿ

ಮಂಗಳೂರು, ಮಾ.30 : ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ಪ್ರಮುಖ ಕಲೆ ಯಕ್ಷಗಾನ, ಆರಾಧನೆ ಕೋಲ, ನೇಮ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ನಿರ್ಬಂಧ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಯಕ್ಷಗಾನ, ಆರಾಧನೆ ಕೋಲ, ನೇಮ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ನಿರ್ಬಂಧ ಇರುವುದಿಲ್ಲ ಆದರೆ ಈ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು ಭಾಗವಹಿಸುವುದು, ಕಾರ್ಯಕರ್ತರಿಂದ ಪ್ರಚಾರ ನಡೆದು ದುರುಪಯೋಗ, ಮತದಾರರ ಓಲೈಕೆ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹಾಗೂ ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ದೂರುಗಳನ್ನು ಸಲ್ಲಿಸಲು ಸಿ- ವಿಜಿಲ್ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಮೂಲಕ ಜಿಲ್ಲೆಯ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು- ಫೋಟೋ ಹಾಗೂ ವೀಡಿಯೋ ಮೂಲಕ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಇನ್ನು ಚುನಾವಣಾ ಪೂರ್ವ ತಪಾಸಣೆ ವೇಳೆ 10 ಲಕ್ಷ ರೂ., 200 ಲೀಟರ್ ಮದ್ಯ ಮತ್ತು 65 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. ಪ್ರಚೋದನಕಾರಿ ಪೋಸ್ಟ್‍ಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಬಹುದಾದ್ದರಿಂದ ಸಾಮಾಜಿಕ ಮಾಧ್ಯಮವನ್ನು ಸಹ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!