ಶಂಕರ್ ಬಿದರಿ ಇಮೇಲ್ ಹ್ಯಾಕ್, ಹಣ ವಂಚನೆ: ಆರೋಪಿಗಳ ಬಂಧನ
ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಇಮೇಲ್ ಹ್ಯಾಕ್ ಮಾಡಿ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ನಾಗಾಲ್ಯಾಂಡ್ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಥಿಯಾ (31), ಸೆರೋಸಾ (27) ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಚಿಕಾ ಬಂಧಿತ ಆರೋಪಿಗಳು. ಪೊಲೀಸರ ತನಿಖೆಯಲ್ಲಿ ಸಾರ್ವಜನಿಕರನ್ನು ವಂಚಿಸುವ ದೊಡ್ಡ ಜಾಲ ಸೃಷ್ಟಿ ಮಾಡಿದ್ದ ಸಂಗತಿ ಬಯಲಾಗಿದೆ.
ಬೆಂಗಳೂರಿನ ಹೊರಮಾವು ಸಮೀಪ ಮನೆ ಮಾಡಿಕೊಂಡಿದ್ದ ಆರೋಪಿಗಳು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿದ್ದರು. ಬಳಿಕ ಈ ಆರೋಪಿಗಳು, ನಿವೃತ್ತ ಪೊಲೀಸ್ ಅಧಿಕಾರಿಯ ಆಪ್ತರಿಗೆ ಇ ಮೇಲ್ ಸಂದೇಶ ರವಾನಿಸಿದ್ದರು. ಇ ಮೇಲ್ ಸಂದೇಶದಲ್ಲಿ ನನಗೆ ತುರ್ತಾಗಿ 25,000 ಹಣ ಬೇಕಿದೆ. ನನ್ನ ಈ ನಂಬರ್ ಗೆ ಕಳಿಸಿ, ಒಂದು ದಿನದಲ್ಲಿ ವಾಪಸು ಕಳಿಸುತ್ತೇನೆ ಎಂಬ ಸಂದೇಶಯುಳ್ಳ ಮಾಹಿತಿ ಕಳುಹಿಸಿದ್ದರು. ಇದನ್ನು ನಂಬಿ ಬದರಿ ಆಪ್ತರೊಬ್ಬರು ಹಣವನ್ನು ಹಾಕಿ ಫೋನ್ ಮಾಡಿ ತಿಳಿಸಿದ್ದಾರೆ. ಈ ವೇಳೆ ಯಾರೋ ಸೈಬರ್ ವಂಚಕರು ಬಿದರಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಈ ಕುರಿತು ಶಂಕರಿ ಬಿದರಿ ಆಪ್ತರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು
ಪ್ರಕರಣದ ತನಿಖೆ ನಡೆಸಿದ ಸೈಬರ್ ಪೊಲೀಸರು, ನಾಗಾಲ್ಯಾಂಡ್ ಮೂಲದ ರುಚಿಕಾ ಅಲಿಯಾಸ್ ಇಸ್ಟರ್ ಕೊನ್ಯಾಕ್ ಳನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ನಾಲ್ಕು ವರ್ಷದ ಹಿಂದೆ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು.
ಅಂತರ್ಜಾಲದಲ್ಲಿ ಪೀಟರ್ ಮತ್ತು ಜೇಮ್ಸ್ ಎಂಬ ಸೈಬರ್ ವಂಚಕರು ಪರಿಚಿತರಾಗಿ, ಸಾರ್ವಜನಿಕರಿಗೆ ವಂಚಿಸುವ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಅಗತ್ಯವಿರುವ ಬ್ಯಾಂಕ್ ಖಾತೆ ಬೇಕಿತ್ತು. ನಾಗಾಲ್ಯಾಂಡ್ ನಿರುದ್ಯೋಗಿ ಯುವಕರಿಗೆ ಹಣದ ಅಮಿಷೆ ಒಡ್ಡಿ ಅವರ ಆಧಾರ್ ಪಾನ್ ಕಾರ್ಡ್ ವಿವರ ಪಡೆದು ಬೋಗಸ್ ಬ್ಯಾಂಕ್ ಖಾತೆ ತೆರೆದಿದ್ದರು. ಅಷ್ಟೇ ಇಲ್ಲದೆ ವಿವಿಧ ಬ್ಯಾಂಕ್ ಗಳಲ್ಲಿ 6 ಕ್ಕೂ ಹೆಚ್ಚು ಬ್ಯಾಂಕ್ ಖಾತೆ ತೆರೆದಿದ್ದರು.
ಬಳಿಕ ಸಾರ್ವಜನಿಕರ ಸಾಮಾಜಿಕ ಜಾಲ ತಾಣಗಳನ್ನು ಹ್ಯಾಕ್ ಮಾಡಿ, ಅವರ ಆಪ್ತ ವರ್ಗಕ್ಕೆ ಹಣ ಕಳಿಸುವಂತೆ ಸಂದೇಶ ರವಾನಿಸುತ್ತಿದ್ದರು. ಪ್ರಮುಖ ವ್ಯಕ್ತಿಗಳ ಸಾಮಾಜಿಕ ಜಾಲ ತಾಣದ ಖಾತೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಬಂದ ಹಣವನ್ನು ಈ ಖಾತೆಗಳಿಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಶಂಕರ್ ಬಿದರಿ ಅವರ ಆಪ್ತ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಜೇಮ್ಸ್ ಮತ್ತು ಪೀಟರ್ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.