ಬೆಂಗಳೂರು:ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸಿಸಿಬಿ ಪೊಲೀಸ್ ಬಲೆಗೆ
ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೈಜೀರಿಯಾ ದೇಶದ ಯುಗೊಚುಕ್ವಾ (34) ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 40 ಲಕ್ಷ ಬೆಲೆಯ 500 ಗ್ರಾಂ ತೂಕದ ಎಂಡಿಎಂಎ, 2 ಮೊಬೈಲ್ ಫೋನ್ ಮತ್ತು ಒಂದು ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಈತ ಭಾರತಕ್ಕೆ ವಿದ್ಯಾರ್ಥಿ ವೀಸಾದಡಿ ಬಂದು ಪಾಸ್ ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಆರೋಪಿ ವಡ್ಡರ ಪಾಳ್ಯದ ಕಾವೇರಿ ನಗರದಲ್ಲಿ ಮನೆಯೊಂದರಲ್ಲಿ ವಾಸವಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ತಕ್ಷಣ ದಾಳಿ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಆರೋಪಿಯ ವಿರುದ್ಧ ಈಗಾಗಲೇ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈತ ತನ್ನ ಸಹಚರ ಮುಂಬೈನ ಮೈಕೇಲ್‍ನಿಂದ ಮಾದಕ ವಸ್ತು ಅಕ್ರಮವಾಗಿ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ. 2018ರಿಂದಲೇ ಮಾದಕ ವಸ್ತುಗಳನ್ನು ಈತ ಮಾರಾಟ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ಮುಂದಾಳತ್ವದಲ್ಲಿ ಇನ್ಸ್ ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿ ತಂಡ ಭಾಗವಹಿಸಿದೆ.