ಸೆಕ್ಸ್ ಸಿಡಿ ಪ್ರಕರಣ: ಲಾಕ್ ಡೌನ್ ಸಮಯದಲ್ಲಿ ಲಾಕ್ ಆದ್ರ ಸಾಹುಕಾರ್!

ಬೆಂಗಳೂರು: ಜಲಸಂಪನ್ಮೂಲ ಸಚಿವ ಖಾತೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಕಾರಣವಾದ, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸೆಕ್ಸ್ ಸಿಡಿ ಪ್ರಕರಣದ ಪ್ರಮುಖ ಕೇಂದ್ರಬಿಂದು ವಿಡಿಯೊದಲ್ಲಿರುವ ನಿಗೂಢ ಯುವತಿ ಕಳೆದ ಏಳೆಂಟು ತಿಂಗಳಿನಿಂದ ವಿಧಾನ ಸೌಧಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಳು ಎಂಬ ಮಾಹಿತಿ ಹೊರಬಿದ್ದಿದೆ.

ವಿಧಾನ ಸೌಧದಲ್ಲಿರುವ ರಮೇಶ್ ಜಾರಕಿಹೊಳಿ ಕಚೇರಿಗೆ ಆಗಾಗ ಬಂದು ಹೋಗುತ್ತಿದ್ದಳು, ಮಾತ್ರವಲ್ಲದೆ ಬಂದಾಗಲೆಲ್ಲಾ ವಿಧಾನ ಸೌಧದ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದ ಈಕೆ ತನಗೆ ಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿದ್ದು ರಾಜ್ಯದ ಜಲಾಶಯಗಳ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಲು ಆಸಕ್ತಿಯಿದೆ ಎಂದು ಹೇಳುತ್ತಿದ್ದಳು.

ಡಾಕ್ಯುಮೆಂಟ್-ಫಿಲ್ಮ್‌ಗಳನ್ನು ಚಿತ್ರೀಕರಿಸಲು ಡ್ರೋನ್‌ಗಳನ್ನು ಬಳಸಲು ತಾನು ಬಯಸುತ್ತಿದ್ದು ಮಾನವರಹಿತ ವೈಮಾನಿಕ ವಾಹನಗಳಾಗಿ ಅಗತ್ಯ ಅನುಮತಿ ಪಡೆಯಬೇಕು. ಸಂರಕ್ಷಿತ ಸ್ಥಳಗಳಲ್ಲಿ ಅನುಮತಿ ಸಿಗದಿರುವುದರಿಂದ ಸಚಿವರ ಬಳಿ ಬಂದಿದ್ದೇನೆ ಎಂದು ಹೇಳುತ್ತಿದ್ದಳು. ಸ್ವತಃ ಸಚಿವ ರಮೇಶ್ ಜಾರಕಿಹೊಳಿಯವರೇ ಆಕೆಯನ್ನು ಹಲವು ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟು ಡಾಕ್ಯುಮೆಂಟರಿ ತಯಾರಿಸಲು ಸಹಾಯ ಮಾಡಿ ಎಂದು ಸೂಚಿಸಿದ್ದರು. ನಂತರ ಆಕೆ ಮತ್ತು ರಮೇಶ್ ಜಾರಕಿಹೊಳಿಯವರು ಬೆಂಗಳೂರು ಹೊರಗಡೆ ಕೂಡ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಕೆ ಹೇಳುವಂತೆ ತಾನು ಬಡವಳಾಗಿದ್ದು ರಮೇಶ್ ಜಾರಕಿಹೊಳಿಯವರ ಬಳಿ ಉದ್ಯೋಗ ಕೇಳಿಕೊಂಡು ಹೋಗಿದ್ದೆ, ಆಗ ಅವರು ತಮಗೆ ಶೋಷಣೆ ನೀಡಿದರು ಎಂಬ ಮಾತುಗಳು ಸುಳ್ಳು ಎನ್ನುತ್ತಾರೆ ಅಧಿಕಾರಿಗಳು.

ಮಾಧ್ಯಮಗಳಲ್ಲಿ ಮೊನ್ನೆ ಮಂಗಳವಾರ ವಿಡಿಯೊ ಪ್ರಸಾರವಾದರೂ ಕೂಡ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ವಿದೇಶದ ಸ್ಥಳದಲ್ಲಿ ವಿಡಿಯೊ ಮಾಡಿ ಅಪ್ ಲೋಡ್ ಮಾಡಲಾಗಿತ್ತೆ ಹೊರತು ಅದು ಭಾರತದ ಸ್ಥಳವಲ್ಲ. ಉದ್ಯೋಗವನ್ನು ಬಯಸಿಬಂದ ಬಡ ಯುವತಿಯೊಬ್ಬಳು ಇಷ್ಟೆಲ್ಲಾ ಮಾಡಲು ಸಾಧ್ಯವೇ? ಕೊಠಡಿಯಲ್ಲಿ ಹಿಡನ್ ಕ್ಯಾಮರಾ ಬಳಸಿ ಮಾಡಿರುವ ವಿಡಿಯೊ ಉನ್ನತ ಗುಣಮಟ್ಟದ್ದಾಗಿದ್ದು ಅದಕ್ಕೆ ಲಕ್ಷಾಂತರ ರೂಪಾಯಿ ಬೇಕು. ಕ್ಯಾಮರಾ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವವರೇ ಮಾಡಿರಬೇಕು. ಚೆನ್ನಾಗಿ ಎಡಿಟ್ ಮಾಡಿಯೇ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಕೂಡ ಸಾಕಷ್ಟು ಹಣ ಬೇಕಲ್ಲವೇ ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ. 

ಇದರ ಹಿಂದೆ ಯಾರ ಕೈವಾಡ?: ಒಟ್ಟಾರೆ ಪ್ರಕರಣ ಹಿಂದೆ ಯಾರ ಕೈವಾಡವಿದೆ ಎಂದು ಸ್ಪಷ್ಟವಾಗದಿದ್ದರೂ ಕೂಡ ವಿಡಿಯೊದಲ್ಲಿ ಕಂಡುಬರುವ ಪ್ರಕಾರ ಯುವತಿಗೆ ರಮೇಶ್ ಜಾರಕಿಹೊಳಿಯನ್ನು ಚೆನ್ನಾಗಿ ಮೊದಲೇ ಪರಿಚಯವಿದೆ ಎಂದು ಅನಿಸುತ್ತದೆ. ಅದರಲ್ಲಿ ಆಕೆ ರಮೇಶ್ ಜಾರಕಿಹೊಳಿಯನ್ನು ಹಲವು ಕಡೆ ಏಕವಚನದಲ್ಲಿ ಸಂಬೋಧಿಸುತ್ತಾಳೆ. ಆಕೆ ಒತ್ತಾಯಪೂರ್ವಕವಾಗಿ ರಮೇಶ್ ಜಾರಕಿಹೊಳಿ ಜೊತೆ ಲೈಂಗಿಕ ಕ್ರಿಯೆಗೆ ಬಂದಂತೆ ಕಂಡುಬರುತ್ತಿಲ್ಲ. 

ರಾಜಕೀಯವಾಗಿ ಅಥವಾ ವೈಯಕ್ತಿಕವಾಗಿ ರಮೇಶ್ ಜಾರಕಿಹೊಳಿಯ ಶತ್ರುಗಳು ಮಾಡಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಬಿಜೆಪಿಯೊಳಗಿನವರೇ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿರುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ. ಕೆಲವು ಪ್ರಾಮುಖ್ಯತೆ ಹೊಂದಿರುವ ಜನರು ಮಾತ್ರ ವೀಡಿಯೊದ ಬಿಡುಗಡೆಯನ್ನು ಸರಿಯಾದ ಸಂದರ್ಭಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿ ಮಾಧ್ಯಮಗಳ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿಸಿದ್ದಾರೆ ಎನಿಸುತ್ತಿದೆ.

ವಿಧಾನಸೌಧದಲ್ಲಿರುವ ಸಿಸಿಟಿವಿ ದಾಖಲೆಗಳು ಮತ್ತು ಫೋನ್ ಕರೆಗಳು ರಮೇಶ್ ಜಾರಕಿಹೊಳಿಗೂ ಯುವತಿಗೂ ಹಲವು ಸಮಯಗಳಿಂದ ಒಡನಾಟವಿತ್ತು ಎಂದು ಹೇಳುತ್ತದೆ. ರಮೇಶ್ ಜಾರಕಿಹೊಳಿಯವರ ಮೊಬೈಲ್ ಫೋನ್ ನಲ್ಲಿ ವಾಟ್ಸಾಪ್ ಇಲ್ಲ, ಅವರು ಮತ್ತೊಬ್ಬರ ಫೋನ್ ತೆಗೆದುಕೊಂಡು ಅದರಿಂದ ಈ ಯುವತಿಗೆ ವಾಟ್ಸಾಪ್ ಮಾಡುತ್ತಿದ್ದರು ಎಂದು ಮೂಲಗಳು ಹೇಳುತ್ತವೆ. 

ಒಮ್ಮೆ ಇದೇ ಯುವತಿ ವಿಧಾನಸೌಧಕ್ಕೆ ಜಾರಕಿಹೊಳಿ ಕಚೇರಿ ಬಳಿ ಬಂದು ಮೂವರು ಪುರುಷರನ್ನು ತನ್ನ ಸಹೋದ್ಯೋಗಿಗಳೆಂದು ಪರಿಚಯ ಮಾಡಿಕೊಟ್ಟಿದ್ದಳು ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ. ಇದೀಗ ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಕೋವಿಡ್ ಸಮಯದಲ್ಲಿ ಜಾರಕಿಹೊಳಿ ಮತ್ತು ಈ ಯುವತಿ ಆಪ್ತವಾಗಿರಬೇಕು, ಈ ಸಮಯದಲ್ಲಿಯೇ ಹಲವು ಬಾರಿ ವಿಡಿಯೊ ಫೋನ್ ಕಾಲ್ ಮಾಡಿರಬೇಕು ಎಂದು ಅನಿಸುತ್ತದೆ ಎನ್ನುತ್ತಾರೆ ಮೂಲಗಳು.

Leave a Reply

Your email address will not be published. Required fields are marked *

error: Content is protected !!