ಪಕ್ಷಕ್ಕೆ ಸೇವೆ ಸಲ್ಲಿಸಿದ ನಾವೂ ಕ್ಯೂನಲ್ಲಿ ಇದ್ದೇವೆ, ನಮಗೂ ಟಿಕೆಟ್ ನೀಡಲಿ- ಮಂಜುನಾಥ್
ಶಿವಮೊಗ್ಗ ಮಾ.23 : ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಆಗದಿದ್ದರೆ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದಿರುವ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಯನೂರು ಮಂಜುನಾಥ್ ಅವರು, ನಿಮ್ಮ ಮಗ ಇನ್ನೂ ಚಿಕ್ಕವನಿದ್ದಾನೆ. ನಂತರ ಅವರಿಗೆ ಟಿಕೇಟ್ ನೀಡಿ, ಸದ್ಯಕ್ಕೆ ಕ್ಯೂನಲ್ಲಿ ನಾವು ಇದ್ದೇವೆ. ನಮಗೆ ನೀಡಲಿ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಶಿವಮೊಗ್ಗ ನಗರದ ವಿವಿಧೆಡೆ ಹಾಕಲಾದ ಫ್ಲೆಕ್ಸ್ನಲ್ಲಿ ‘ಹರಕು ಬಾಯಿಗೆ ಬೀಗ ಹಾಕಲಿ’ ಎಂಬ ವಾಕ್ಯದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ’ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅದು ಅನ್ವಯಿಸುತ್ತದೆ ಎಂದರು. ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿ ಎಂದು ಟಾಂಗ್ ನೀಡಿದರು.
ಇದೇ ವೇಳೆ ಬಿಜೆಪಿ ತ್ಯಜಿಸಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಷ್ಠುರವಾದ ಮಾತನಾಡಿದ ಕೂಡಲೇ ಆಯನೂರು ಅಲ್ಲಿಗೆ ಹೋಗುತ್ತಾರೆ. ಇಲ್ಲಿಗೆ ಹೋಗುತ್ತಾರೆ ಅನ್ನುತ್ತಾರೆ. ಪಕ್ಷವನ್ನು ಸರಿ ಮಾಡಬೇಕು ಎಂದು ನೈಜ ಬಡಿದಾಟ ಆರಂಭಿಸಿದ್ದೇನೆ. ಅದಕ್ಕೆ ಏನೇನೊ ಅರ್ಥ ಕೊಟ್ಟರೆ ಅದಕ್ಕೆ ನಾನು ಹೊಣೆಗಾರನಲ್ಲ. ನನಗೆ ಮದುವೆ ಆಗಲು ಮನೆಯಲ್ಲೇ ಹೆಣ್ಣು ಇದೆ ಎನ್ನುವಾಗ ಪಕ್ಕದ ಮನೆಯಲ್ಲಿ ನಾನು ಯಾಕೆ ನೋಡಲಿ ಅಥವಾ ರಸ್ತೆಯಲ್ಲಿ ಹೋಗುವವರನ್ನು ನಾನು ಯಾಕೆ ನೋಡಲಿ, ಶಿವಮೊಗ್ಗ ನಗರ ಕ್ಷೇತ್ರದಿಂದ ನನಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ಯಾವುದೋ ಧರ್ಮದ ದೇವರು ಕಿವುಡನೇ, ಕುರುಡನೇ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಮಾತಾಡುವುದು ಬೇಡ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಜವಾಬ್ದಾರಿಯಿಂದ ಮಾತಾಡಬೇಕು ಎಂಬ ನಿರೀಕ್ಷೆ ನನಗೂ ಇದೆ. ಬಿಜೆಪಿಗೆ ಧಕ್ಕೆ ಬರುವ ಯಾವುದೇ ಮಾತುಗಳನ್ನು ಯಾವುದೇ ನಾಯಕರು ಹೇಳಿದರೂ ಅದನ್ನು ಸ್ವೀಕಾರ ಮಾಡಬೇಕೆಂಬ ಬಲವಂತ ನಮಗೆ ಯಾರಿಗೂ ಇಲ್ಲ. ಸಂಘಟನೆಯ ಹಿತದೃಷ್ಟಿಯಿಂದ ಈಶ್ವರಪ್ಪ ಹೀಗೆ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ. ಈಶ್ವರಪ್ಪ ಹಾಗೆ ಮಾತಾಡಿದ್ದರೆ ತಿದ್ದಿಕೊಳ್ಳುವುದು ಒಳ್ಳೆಯದು. ಸಣ್ಣ ಘಟನೆ ನಡೆದರೂ ಶಿವಮೊಗ್ಗದಲ್ಲಿ ಏನಾಗುತ್ತದೆ ಎಂಬುದು ಊಹಿಸಿಕೊಳ್ಳಲಿ ಎಂದು ಹೇಳಿದರು.