ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

ಹಾಸನ ಮಾ.23 : ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ಮುಂಜಾನೆ ನಿಧನರಾಗಿದ್ದಾರೆ.

ಕಳೆದ ಕೆಲ ತಿಂಗಳಿಂದ ಸ್ವಾಮೀಜಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮುಂಜಾನೆ ದಿಡೀರ್ ಅರೋಗ್ಯ ಸ್ಥಿತಿಯಲ್ಲಿ ಏರು ಪೇರು ಆಗಿದ್ದು, ಕೂಡಲೆ ಶ್ರವಣಬೆಳಗೊಳದ ಜೈನ ಮಠಕ್ಕೆ ವೈದ್ಯರು ಆಗಮಿಸಿ ಪರೀಕ್ಷೆ ನಡೆಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣಕ್ಕೆ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನ ಸ್ಥಳಾಂತರ ಮಾಡಲಾಗಿತ್ತು. ಆದರೆ ಅವರು ಮುಂಜಾನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಜನಿಸಿದ್ದರು. ಮೂಲತಃ  ಕಾರ್ಕಳದ ವರಂಗ ಗ್ರಾಮದವರು. 1970 ರಲ್ಲಿ ಜೈನ ಮಠದ ಪೀಠವೇರಿದ್ದ ಶ್ರೀಗಳು, ಇತಿಹಾಸ ತಜ್ಞ, ತತ್ವಜ್ಞಾನಿ, ಇತಿಹಾಸ, ಕನ್ನಡ, ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪ್ರಾಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1981ರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಇವರಿಗೆ ಕರ್ಮಯೋಗಿ ಎಂದು ಬಿರುದು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!