ಚಿಂಚನಸೂರು ಮತ್ತೆ ಕಾಂಗ್ರೆಸ್ ಗೆ-ಬೊಮ್ಮಾಯಿ ಅಸಮಾಧಾನ
ಹುಬ್ಬಳ್ಳಿ ಮಾ.21: ಕಾಂಗ್ರೆಸ್ ನಿಂದ ಬಂದ ವಿಧಾನ ಪರಿಷತ್ತು ಸದಸ್ಯ ಬಾಬುರಾವ ಚಿಂಚನಸೂರು ಅವರಿಗೆ ಬಿಜೆಪಿ ಎಲ್ಲಾ ಗೌರವ, ಸ್ಥಾನಮಾನ ನೀಡಿದರೂ ಪುನಃ ಕಾಂಗ್ರೆಸ್ ಗೆ ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮದವರ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಹಲವು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಭಾರತ ಜೋಡೋ ಯಾತ್ರೆ ಮಾಡಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಬ್ರಿಟನ್ ವಿವಿಯಲ್ಲಿ ದೇಶ ವಿರೋಧಿ ಮಾತುಗಳನ್ನಾಡಿದ್ದಾರೆ. ದೇಶ ವ್ಯಾಪ್ತಿ ಇದಕ್ಕೆ ಖಂಡನೆ ವ್ಯಕ್ತವಾಗಿದೆ. ರಾಜ್ಯದ ಜನತೆಯೂ ಕೂಡ ರಾಹುಲ್ ಮಾತಿಗೆ ಬೆಲೆ ಕೊಡುವುದಿಲ್ಲ ಎಂದರು. ಹಾಗೂ ಗುರುಮಠಕಲ್ಲ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಚನ್ನಾಗಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇತಿಹಾಸವನ್ನು ಮರೆಮಾಚುವ ಕೆಲಸ ನಡೆದಿದೆ. ಹಲವಾರು ಪ್ರಕರಣಗಳಲ್ಲಿ ಸತ್ಯ ಮರೆಮಾಚುವ ಕೆಲಸ ನಡೆದಿದೆ. ಅವುಗಳ ಸತ್ಯ ಹೇಳಿದರೆ ಇವರಿಗೆ ತಡೆದುಕೊಳ್ಳಲಾಗಲ್ಲ. ಸತ್ಯ ಶೋಧನೆ ಆದಾಗ ಎಲ್ಲವೂ ಹೊರಗೆ ಬರುತ್ತದೆ, ಜಯ ಸಿಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಸಾಕಷ್ಟು ಚಾರ್ಜ್ ಗಳಿವೆ. ಲೋಕಾಯುಕ್ತದಲ್ಲಿಯೂ ದೂರುಗಳಿವೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆಂದರೆ ಇದ್ಲಿಗೆ ಮಸಿಗೆ ಬುದ್ಧಿ ಹೇಳಿದಂತೆ. ಭಾರತದಲ್ಲಿ ಕಾಂಗ್ರೆಸ್ ಪತನ ಶುರುವಾಗಿದೆ. ರೀಡೋ ವಾಚ್ ಬಗ್ಗೆ ನ್ಯಾಯಾಂಗ ತನಿಖೆ ಮಾಡುತ್ತಿದೆ. ವಿಪಕ್ಷಗಳ 59 ಪ್ರಕರಣಗಳ ಪೈಕಿ ಕೆಲವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ಕೆಲವನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದರು.
ಕಾಂಗ್ರೆಸ್ ನಾಯಕರು ಬೇರೆ ರಾಜ್ಯದಲ್ಲಿ ಈ ರೀತಿ ಸುಳ್ಳು ಭರವಸೆಗಳನ್ನು ನೀಡಿ ಈಡೇರಿಸದೇ ಇರುವುದನ್ನು ದೇಶದ ಜನ ನೋಡಿದ್ದಾರೆ. ರಾಜಾಸ್ತಾನ, ಛತ್ತೀಸಘಡ ಮತ್ತಿತರ ಕಡೆ ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ. ಜನರನ್ನು ಯಾಮಾರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಸಿಟಿಂಗ್ ಕಾರ್ಡ್ ಎಂದು ಲೇವಡಿ ಮಾಡಿದರು.
ಇದೇ ವೇಳೆ ಅವರು, ಸಾರಿಗೆ ನೌಕರರ ಬೇಡಿಕೆ ಈಡೇರಿಸಿದ್ದೇವೆ. ಪ್ರಮುಖ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದೇನೆ. ಮುಖಂಡರು ಆಗಮಿಸಿ ಅಭಿನಂದನೆ ಸಲ್ಲಿಸಿ ಮುಷ್ಕರ ವಾಪಸ್ ಪಡೆದಿದ್ದಾರೆ. ಪ್ರಮುಖ ಸಂಘಟನೆ ಜೊತೆ ಮಾತನಾಡಿದ್ದು, ಮುಷ್ಕರಕ್ಕೆ ಹೋಗೋ ಪ್ರಶ್ನೆಯೇ ಇಲ್ಲ ಎಂದರು.