ಉರಿಗೌಡ-ನಂಜೇಗೌಡ ವಿವಾದ: ಸಮಾಜದಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ- ಬಿಜೆಪಿ ನಾಯಕರಿಗೆ ನಿರ್ಮಲಾನಂದ ಸ್ವಾಮೀಜಿ ಕಿವಿಮಾತು!

ಬೆಂಗಳೂರು: ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಟಿಪ್ಪುವನ್ನು ಕೊಂದಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಯ ವಿವಾದಕ್ಕೆ ಅಂತ್ಯ ಹಾಡಲು ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮದ್ಯ ಪ್ರವೇಶಿಸಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಬಿಜೆಪಿ ನಾಯಕರುಗಳಿಗೆ ಸಲಹೆ ನೀಡಿದ್ದಾರೆ.

ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು ಮತ್ತು ಸಮುದಾಯಕ್ಕೆ ಅಪಖ್ಯಾತಿ ತರಬಾರದು ಎಂದು ಸೂಚನೆ ನೀಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ.ಸಿ.ಎನ್.ಅಶ್ವತ್ ನಾರಾಯಣ್, ಗೋಪಾಲಯ್ಯ, ಮುನಿರತ್ನ ಮತ್ತಿತರರಿಗೆ ಐತಿಹಾಸಿಕ ಹಿನ್ನೆಲೆ ವಿವರಿಸಲಾಗಿದ್ದು, ಈ ಬಗ್ಗೆ ಮಾತನಾಡಬಾರದು ಶ್ರೀಗಳು ಹೇಳಿದ್ದಾರೆ.

ಉರಿಗೌಡ, ದೊಡ್ಡನಂಜೇಗೌಡರ ಬಗ್ಗೆ ಶಾಸನಗಳಿದ್ದರೆ, ಇತಿಹಾಸದಲ್ಲಿ ಸಮರ್ಪಕ ಉಲ್ಲೇಖ ಸಿಕ್ಕಿದರೆ ಅವುಗಳನ್ನು ಆದಿಚುಂಚನಗಿರಿ ಮಠಕ್ಕೆ ತಂದು ಒಪ್ಪಿಸಲಿ. ಎಲ್ಲವನ್ನೂ ಕ್ರೂಡೀಕರಿಸಿ, ಪರಿಶೀಲಿಸಿ ನಿರ್ಧಾರಕ್ಕೆ ಬರಲಾಗುವುದು. ಶಾಸನವನ್ನು ಪರಿಶೀಲನೆ ಮಾಡುವ ತಾಂತ್ರಿಕ (ಕಾರ್ಬನ್ ಡೇಟಿಂಗ್‌) ವಿಧಾನವಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ತಜ್ಞರು ನಮ್ಮಲ್ಲಿದ್ದಾರೆ. ತಂದು ಕೊಟ್ಟ ಮಾಹಿತಿಯನ್ನು ಓರೆಗೆ ಹಚ್ಚಿ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದಾರೆ ಎಂದು ಬಿಜೆಪಿ ನಾಯಕರು ಚುನಾವಣೆಗೆ ಮುನ್ನ ಹೇಳುತ್ತಿದ್ದರೆ, ಇದೊಂದು ಕಟ್ಟುಕಥ, ಸಮುದಾಯದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಚಿತ್ರ ನಿರ್ಮಾಪಕರೂ ಆಗಿರುವ ಸಚಿವ ಮುನಿರತ್ನ ಅವರು ಸಹೋದರರ ಕುರಿತು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಮಲಾನಂದನಾಥ ಸ್ವಾಮೀಜಿಗಳ  ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!