ಉರಿಗೌಡ, ನಂಜೇಗೌಡ ಚಿತ್ರದ ವಿರುದ್ಧ ನಿರ್ಮಲಾನಂದ ಸ್ವಾಮೀಜಿ ಮುಂದಾಳತ್ವ ವಹಿಸಿ ಹೋರಾಟ ನಡೆಸಲಿ-ಡಿ.ಕೆ ಶಿವಕುಮಾರ್
ಬೆಳಗಾವಿ ಮಾ.20 : ಉರಿಗೌಡ, ನಂಜೇಗೌಡ ಸಿನಿಮಾದ ವಿರುದ್ಧ ಶ್ರೀಗಳೇ ಮುಂದಾಳತ್ವ ವಹಿಸಿ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, ಬಿಜೆಪಿಯ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಹಾಗೂ ಅಶ್ವಥನಾರಾಯಣ ಅವರು ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳನ್ನು ಹೇಳಲು ಹೋಗ್ತಿದ್ದಾರೆ. ಈಗ ಉರಿಗೌಡ, ನಂಜೆಗೌಡ ಬಗ್ಗೆ ಚಿತ್ರ ಮಾಡ್ತಿದ್ದಾರೆ. ಈ ಚಿತ್ರ ಮಾಡಲು ಹೊರಟಿರುವವರ ಜೊತೆಗೆ ನಿರ್ಮಲಾನಂದ ಶ್ರೀಗಳು ಯಾವುದೇ ಕಾರಣಕ್ಕೂ ಮಾತುಕತೆ ನಡೆಸಬಾರದು. ಇದರ ವಿರುದ್ಧ ಶ್ರೀಗಳೇ ಮುಂದಾಳತ್ವ ವಹಿಸಿ ಹೋರಾಟ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.
ಒಕ್ಕಲಿಗರ ಮತ ಸೆಳೆಯಲು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ನಿರ್ಮಲಾನಂದ ಸ್ವಾಮೀಜಿ ಇದರ ಬಗ್ಗೆ ಹೋರಾಟ ಮಾಡಬೇಕು.ಎಲ್ಲ ಸಮಾಜದ ಸ್ವಾಮಿಗಳು, ಸಾಹಿತಿಗಳು, ಎಲ್ಲ ಸಂಘಟನೆಯವರು, ಹೋರಾಟಗಾರರು ಇದಕ್ಕೆ ಕೈ ಜೋಡಿಸಬೇಕು, ಎಲ್ಲ ಸಮಾಜಗಳ ಮಠಾಧೀಶರು ಕೈಜೋಡಿಬೇಕು ಎಂದರು.
ಅಶ್ವಥನಾರಾಯಣ, ಶೋಭಾ ಕರಂದ್ಲಾಜೆ ಟಿಪ್ಪು ಬಗ್ಗೆ ತಪ್ಪುಮಾಹಿತಿ ನೀಡಲು ಹೊರಟಿದ್ದಾರೆ. ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ, ಸಾಕಷ್ಟು ಗ್ರಂಥಗಳಿವೆ. ಟಿಪ್ಪು ಸುಲ್ತಾನ್ ನಿಧನರಾಗಿ ಎರಡು ಶತಮಾನ ಆಗಿದೆ. ನಮಗೆ ಗೊತ್ತಿಲ್ಲದ ಇತಿಹಾಸ ಮಾಡಲು ಹೊರಟಿದ್ದಾರೆ. 50 ಗ್ರಂಥಗಳು ರಚನೆ ಆಗಿವೆ. ಉರಿಗೌಡ ಹಾಗೂ ನಂಜೇಗೌಡ ಹೆಸರಿನಲ್ಲಿ ಜಾತಿ ಬಣ್ಣ ಕಟ್ಟಿಚಿತ್ರ ನಿರ್ಮಿಸಿ ಕಾಲ್ಪನಿಕ ಕಥೆ ಕಟ್ಟುತ್ತಿದ್ದಾರೆ. ಇದರ ವಿರುದ್ಧ ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.