ಶಾಸಕ ಹರ್ಷವರ್ಧನ್ ವಿರುದ್ಧ ಸ್ವಪಕ್ಷದವರಿಂದಲೇ ಅನುದಾನ ದುರ್ಬಳಕೆ ಆರೋಪ
ಮೈಸೂರು,ಮಾ.10 : ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ವಿರುದ್ಧ ಸ್ವಪಕ್ಷದವರಿಂದಲೇ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿದೆ.
ಶಾಸಕ ಹರ್ಷವರ್ಧನ್ ವಿರುದ್ಧದ ಆರೋಪಗಳ ಕುರಿತು ಮಾತನಾಡಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು, ಕೆಲವು ತಿಂಗಳ ಹಿಂದೆ ಶಾಸಕ ಹರ್ಷವರ್ಧನ್ ಅವರು, ನನ್ನ ಬಳಿ ಈ ಪ್ರಸ್ತಾವನೆಯನ್ನು ತಂದಿದ್ದರು. ಆದರೆ ಶ್ರೀಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಹಣವನ್ನು ಈ ರೀತಿ ಬೇರೆ ಸಮುದಾಯಗಳ ಭವನಗಳನ್ನು ನಿರ್ಮಿಸಲು ಅವಕಾಶ ಇಲ್ಲ ಎಂದು ಹೇಳಿ ನಾನು ಅವರ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೆ ಎಂದು ಅವರು ತಿಳಿಸಿದ್ದಾರೆ.
”ಈ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಶಾಸಕರು ಮಂಜೂರು ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದು ನನಗೆ ಗೊತ್ತಿಲ್ಲ, ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ ಅವರು ಅನುಮೋದನೆ ಪಡೆದಿರಬಹುದು. ಶಾಸಕರು ಹೀಗೆ ಮಾಡಿರುವುದು ತಪ್ಪು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾನು ತಡೆಹಿಡಿದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ”ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆದಾಯದಿಂದ ಇತರೆ ಸಮುದಾಯಗಳ ಸಮುದಾಯ ಭವನಗಳನ್ನು ನಿರ್ಮಿಸುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆಯೇ ಕೈಗೆತ್ತಿಕೊಳ್ಳಲಾಗಿದೆ” ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.