ಹೂಡಿಕೆ ಮೇಲೆ 50% ಲಾಭ: ವಾಟ್ಸ್ ಆ್ಯಪ್ ಜಾಹಿರಾತು ನಂಬಿ 20.99 ಲಕ್ಷ ಕಳೆದುಕೊಂಡ ವ್ಯಕ್ತಿ
ಬೆಂಗಳೂರು ಮಾ.8 : ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬಂದ ಜಾಹೀರಾತು ನಂಬಿದ ಬೆಂಗಳೂರಿನ ನಿವಾಸಿಯೊಬ್ಬರು 20.99 ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಈ ಬಗ್ಗೆ ಹಣ ಕಳೆದುಕೊಂಡಿರುವ ಬನಶಂಕರಿ 5ನೇ ಹಂತದ ನಿವಾಸಿ 55 ವರ್ಷದ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ‘ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದ ಇವರು ಹೂಡಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅಲ್ಲದೆ ಕೆಲ ಜಾಲತಾಣಗಳ ಸದಸ್ಯರಾಗಿ ಅಲ್ಲಿಯೇ ಹಣ ಹೂಡಿಕೆ ಮಾಡಿದ್ದರು.
2022ರಲ್ಲಿ ವಾಟ್ಸ್ಆ್ಯಪ್ ಗ್ರೂಪ್ವೊಂದರಲ್ಲಿ ದೂರುದಾರ ವ್ಯಕ್ತಿಯ ಮೊಬೈಲ್ ನಂಬರ್ ಸೇರಿಸಿದ್ದ ಆರೋಪಿಗಳು, ಹೂಡಿಕೆ ಮೇಲೆ ಶೇ 50ರಷ್ಟು ಲಾಭ ನೀಡುವುದಾಗಿ ಜಾಹೀರಾತು ನೀಡಿದ್ದರು.’ ‘ಆರೋಪಿಗಳ ಜಾಹೀರಾತು ನಂಬಿದ್ದ ದೂರುದಾರ ವ್ಯಕ್ತಿ, ಹಂತ ಹಂತವಾಗಿ 20.99 ಲಕ್ಷ ಹೂಡಿಕೆ ಮಾಡಿದ್ದರು. ಹಣ ಪಡೆದಿದ್ದ ಆರೋಪಿಗಳು, ಯಾವುದೇ ಲಾಭ ನೀಡದೇ, ಅಸಲು ಹಣವನ್ನೂ ವಾಪಸು ನೀಡದೆ ವಂಚಿಸಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.