ವಿಮಾನದಲ್ಲಿ ಧೂಮಪಾನ: ಮಹಿಳೆ ಬಂಧನ

ಬೆಂಗಳೂರು ಮಾ.8 : ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ(24) ಬಂಧಿತ ಮಹಿಳೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಿಯಾಂಕಾ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾರೆ ಎಂದು ಶಂಕಿಸಿದ ವಿಮಾನ ಸಿಬ್ಬಂದಿ ಆಕೆಯನ್ನು ಬಾಗಿಲು ತೆರೆಯುವಂತೆ ಕೇಳಿದ್ದಾರೆ. ಶೌಚಾಲಯದ ಡಸ್ಟ್ ಬಿನ್‌ನಲ್ಲಿ ಸಿಗರೇಟ್ ಪತ್ತೆಯಾಗಿದೆ. ಬಳಿಕ ಸಿಬ್ಬಂದಿ ಡಸ್ಟ್‌ಬಿನ್‌ಗೆ ನೀರು ಸುರಿದರು. ಬಳಿಕ ವಿಮಾನ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ಪ್ರಿಯಾಂಕಾ ಅವರನ್ನು ವಿಮಾನ ನಿಲ್ದಾಣದ ಭದ್ರತಾ ವಿಭಾಗಕ್ಕೆ ಒಪ್ಪಿಸಿದ್ದಾರೆ.

ತಡರಾತ್ರಿ ಇಂಡಿಗೋ ವಿಮಾನ ಸಂಖ್ಯೆ 6E 716 ರ ಶೌಚಾಲಯದಲ್ಲಿ ಈ ಮಹಿಳೆ ಧೂಮಪಾನ ಮಾಡುತ್ತಿದ್ದರು. ವಿಮಾನವು ಕೋಲ್ಕತ್ತಾದಿಂದ ರಾತ್ರಿ 9.50 ಕ್ಕೆ ಹೊರಟು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದೆ. ವಿಮಾನ ಲ್ಯಾಂಡ್ ಆಗುವ 30 ನಿಮಿಷ ಮೊದಲು ಪ್ರಿಯಾಂಕಾ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ.

ಇಂಟರ್‌ಗ್ಲೋಬ್ ಏವಿಯೇಷನ್‌ನ ಭದ್ರತಾ ವಿಭಾಗದ ಸಹಾಯಕ ವ್ಯವಸ್ಥಾಪಕ ಶಂಕರ್ ಕೆ ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಎಸಗಿದ್ದಕ್ಕಾಗಿ ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!