ಪರ್ಲ್ಸ್(PACL) ಗ್ರೂಪ್ ಹಗರಣ: ಫಿಜಿಯಿಂದ ಗಡಿಪಾರಾದ ಆರೋಪಿ ಬಂಧನ
ಹೊಸದಿಲ್ಲಿ, ಮಾ.8 : ಪರ್ಲ್ಸ್(PACL) ಗ್ರೂಪ್ ಹಗರಣಕ್ಕೆ ಸಂಬಂಧಿಸಿ ಫಿಜಿಯಿಂದ ಗಡಿಪಾರು ಮಾಡಿದ ಬಳಿಕ ಆರೋಪಿಯನ್ನು ಸಿಬಿಐ ಬಂಧಿಸಿದೆ.
ಹರ್ಚಂದ್ ಸಿಂಗ್ ಗಿಲ್ ಬಂಧಿತ ಆರೋಪಿ. ಪರ್ಲ್ಸ್ ಸಮೂಹದ 60,000 ಕೋ. ರೂ. ಹಗರಣಕ್ಕೆ ಸಂಬಂಧಿಸಿ ದೇಶದಿಂದ ಪರಾರಿಯಾಗಿ ವಿದೇಶಗಳಲ್ಲಿ ವಾಸಿಸುತ್ತಿರುವ ಆರೋಪಿಗಳನ್ನು ಹಿಂದೆ ತರಲು ಸಿಬಿಐ ಆರಂಭಿಸಿದ ‘ಆಪರೇಷನ್ ತ್ರಿಶೂಲ್’ ಅಡಿಯಲ್ಲಿ ಫಿಜಿಯಿಂದ ಗಡಿಪಾರು ಮಾಡಲಾದ ಸಿಂಗ್ನನ್ನು ಬಂಧಿಸಿ ಮಾ.6 ರಂದು ರಾತ್ರಿ ದೇಶಕ್ಕೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಆರಂಭಿಸಲಾದ ಪ್ರಾಥಮಿಕ ತನಿಖೆಯ ಆಧಾರದಲ್ಲಿ ಪರ್ಲ್ಸ್ ಸಮೂಹದ ಎರಡು ಪ್ರಮುಖ ಕಂಪೆನಿಗಳಾದ ಪಿಜಿಎಫ್ ಲಿಮಿಟೆಡ್, ಪಿಎಸಿಎಲ್ ಲಿಮಿಟೆಡ್, ಅದರ ಆಗಿನ ಮುಖ್ಯಸ್ಥೆ ನಿರ್ಮಲಾ ಸಿಂಗ್ ಭಂಗು ಹಾಗೂ ಇತರರ ವಿರುದ್ಧ ಸಿಬಿಐ 2014 ಫೆಬ್ರವರಿ 19ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಮೂರು ಖಾಸಗಿ ಕಂಪೆನಿಗಳು ಸೇರಿದಂತೆ 27 ಆರೋಪಿಗಳ ವಿರುದ್ಧ ಸಿಬಿಐ 2022 ಜನವರಿಯಲ್ಲಿ ಪೂರಕ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಹೆಸರಿಸಿದವರಲ್ಲಿ 11 ಮಂದಿಯನ್ನು ದಿಲ್ಲಿ, ಚಂಡಿಗಢ, ಕೋಲ್ಕತ್ತಾ, ಭುವನೇಶ್ವರ ಹಾಗೂ ಇತರ ಕಡೆಗಳಿಂದ 2021 ಡಿಸೆಂಬರ್ನಲ್ಲಿ ಬಂಧಿಸಲಾಗಿತ್ತು. ಆರೋಪಿ ಕಂಪೆನಿಗಳನ್ನು ಪರ್ಲ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೊಜೆಕ್ಟ್ಸ್ ಲಿಮಿಟೆಡ್, ಎಆರ್ಎಸ್ಎಸ್ ಇನ್ಫ್ರಾಸ್ಟ್ರಕ್ಚರ್ ಪ್ರೊಜೆಕ್ಟ್ಸ್ ಲಿಮಿಟೆಡ್ ಹಾಗೂ ಜೈನ್ ಇನ್ಫ್ರಾ ಪ್ರೊಜೆಕ್ಟ್ಸ್ ಲಿಮಿಟೆಡ್ ಎಂದು ಗುರುತಿಸಲಾಗಿತ್ತು.